Saturday 5 May 2012

ಕಲ್ಮಡ್ಕ ಶಾಲೆ - ೧


ಅಕ್ಕ ಅಣ್ಣ ಮಂಗಳೂರಿನಲ್ಲಿ ಅಜ್ಜಮನೆಯ ಸುಸಂಸ್ಕೃತ ವಾತಾವರಣದಲ್ಲಿದ್ದು, ಉತ್ತಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದರು. ಅವರಿಂದ ಹತ್ತು ವರ್ಷಕ್ಕೂ ಚಿಕ್ಕವಳಾದ ನಾನು ಸರ್ವದಾ "ಸಣ್ಣವಳು" (ಈಗಲೂ!) ಅಮ್ಮನ ಜೊತೆಗಿದ್ದೇ ಕಲಿಯಲಿ, "ಊರಿಗೆ ಮುಂದೆ ಕಿಂಡರ್ ಗಾರ್ಟನ್ ಹೇಳಿ ಎಲ್ಲ ಹೋಗದ್ರೆ ಅಕ್ಕು" ಎಂದು ಕಲ್ಮಡ್ಕದ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲು ನಿರ್ಧರಿಸಿದರು. "ಹಳ್ಳಿ ಶಾಲೆ ಆದ್ರೆ ಎಂತಾತು? ಗೋಳ್ತಜೆ ಮಾವ ಹೆಡ್ ಮಾಷ್ಟ್ರು , ಬೇರೆ ಮಾಷ್ಟ್ರಕ್ಕಳೂ ಹುಷಾರಿದ್ದವು." ಅಂತ ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡೆ.

ಅಪ್ಪ ಅಮ್ಮನ ಈ ನಿರ್ಧಾರಕ್ಕೆ ನಾನೆಷ್ಟು ಋಣಿ!!

 ಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರ ಕೆಲಸ ಬರೀ ಫಾರ್ಮ್ ಭರ್ತಿ ಮಾಡಿ "ನಾಳೆ ಶಾಲೆಗೆ ಕಳಿಸಿ" ಎನ್ನುವಲ್ಲಿಗೆ ಮುಗಿಯುವುದಿಲ್ಲ. ಎಷ್ಟೋ ಜನರಿಗೆ ತಮ್ಮ ಮಕ್ಕಳ ಜನ್ಮ ದಿನಾಂಕ ನೆನಪಿರುವುದಿಲ್ಲ. "ಬಿಸು ಕರಿತ್ ನಾಲ್ ನೆ ದಿನ" (ವಿಷು - ಸೌರ ಯುಗಾದಿ ಕಳೆದು ನಾಕನೇ ದಿನ) ಎಂದೋ "ಆನಿ ಮಲ್ಲ ಬರ್ಸತ ದುಂಬುನಾನಿ ಪುಟ್ಟುನಾಯೆ" (ಅಂದು ದೊಡ್ಡ ಮಳೆ ಬಂದ ಹಿಂದಿನ ದಿನ ಹುಟ್ಟಿದಾತ) ಎಂದೋ ಹೇಳಿದರೆ,  ಅವರು "ಮರ್ಯಾಲನ? " , ಮಳೆಗಾಲವೇ? ಎಂದು ಕೇಳಿಕೊಂಡು , ಇಲ್ಲವಾದರೆ ಆ ದೊಡ್ಡ ಮಳೆಯ ನೆನಪಿನ ಜಾಡು ಹಿಡಿದು ಆಸುಪಾಸಿನ ತಿಂಗಳು, ಮನಸ್ಸಿಗೆ ಬಂದೊಂದು ತಾರೀಕು, ಮಗುವಿನ ಗಾತ್ರ ನೋಡಿ ಅವರೇ ವಯಸ್ಸು ಅಂದಾಜು ಮಾಡಿ ಹುಟ್ಟಿದ ವರ್ಷ ಬರೆದುಕೊಳ್ಳುತ್ತಿದ್ದರು.

 ಮೂಲತಹ ಅನಕ್ಷರಸ್ಥರು ಹಾಗೂ ಕರ್ಮಕರ ವರ್ಗದವರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಯೋಚನೆಯೇ ದೊಡ್ಡ ಹೆಜ್ಜೆ. ಇನ್ನು ಅವರ ವಿವರಗಳ ನಿಖರತೆಗೆ  ಆದ್ಯತೆ ಕೊಟ್ಟರೆ "ಈ ಎಲ್ಲ ರಗಳೆಯೇ ಬೇಡ. ನಮ್ಮ ಜೊತೆಗೆ ಕೆಲಸಕ್ಕೇ ಬರಲಿ ಹುಡುಗ" ಎಂದುಕೊಳ್ಳುವ ಸಾಧ್ಯತೆಯೂ ಬಹಳ. ತಮ್ಮ ಅನುಭವದಿಂದ ಇದೆಲ್ಲ ಅರಿತಿದ್ದ ಗೋಳ್ತಜೆ ಮಾವ ಎಷ್ಟು ಮಕ್ಕಳಿಗೆ ಹೊಸ ಜಾತಕ ಕೊಟ್ಟಿದ್ದರೋ ಏನೋ !

ಅಷ್ಟೇ ಅಲ್ಲ , 'ನಾಮಕರಣ'ವೂ ಅವರ ಜವಾಬ್ದಾರಿಗಳಲ್ಲೊಂದು!

ನಮ್ಮೂರಿನ ಪರಿಶಿಷ್ಟ ಜಾತಿ , ಪಂಗಡಗಳ ಜನರ ಹೆಸರಿನಲ್ಲೊಂದು ಸೊಗಸಿದೆ. ಆದಿತ್ಯವಾರ ಹುಟ್ಟಿದರೆ - ಐತ್ತ /ಐತ್ತೆ , ಸೋಮವಾರ - ಚೋಮ/ಚೋಮು, ಮಂಗಳವಾರ -ಅಂಗಾರ/ಅಂಗಾರೆ; ಗುರುವಾರ ಹುಟ್ಟಿದರೆ ಗುರುವ, ಶುಕ್ರವಾರ ತುಕ್ರ , ಶನಿವಾರ ಜನಿಸಿದವರು ಚನಿಯ, ತನಿಯ /ಚನಿಯಾರು. ಇದಲ್ಲದೆ ಬಾಗಿ, ಕೊರಗ, ಮನ್ಸ, ಭಟ್ಯ, ತಿಮ್ಮಕ್ಕ ಹೀಗೆ  ವೈವಿಧ್ಯಮಯ ಹೆಸರುಗಳು!

ಈ ವರ್ಗದವರಿಗೆ ವಿದ್ಯೆಗೆ, ಉದ್ಯೋಗಕ್ಕೆ ಇರುವ ಮೀಸಲಾತಿಯ ಬಗ್ಗೆ ಅಧ್ಯಾಪಕರಿಗೆ ಅರಿವಿತ್ತು. 'ಕಲ್ತು ಹುಷಾರಾಗಿ' ಮುಂದೊಂದು ದಿನ ಉತ್ತಮ ಹುದ್ದೆಯನ್ನು ನಮ್ಮ ಶಾಲೆ ಮಕ್ಕಳು ಅಲಂಕರಿಸಲಿ ಎಂಬ ಉತ್ತಮ  ಆಶಯ ಅವರದು. ದೊಡ್ಡ ಆಫೀಸರ್ ಆದವರು 'ಮಿಸ್ಟರ್.  ಐತ್ತ' ಎನ್ನುವುದಕ್ಕಿಂತ 'ಮಿಸ್ಟರ್.ಯಶವಂತ' ಯಾ 'ಮಿಸ್ಟರ್.ಸುಂದರ' ಎಂದಿದ್ದರೆ ಚೆನ್ನಲ್ಲವೇ? ಹೀಗೆ 'ಬಾಗಿ' ಭಾಗ್ಯಶ್ರೀ , 'ಚೋಮ' ಸೋಮಶೇಖರ ಆಗುತ್ತಿದ್ದರು. ಮುಖ್ಯೋಪಾಧ್ಯಾಯರು ಅಡ್ಮಿಶನ್ ಸಮಯದಲ್ಲಿ ಅದೆಷ್ಟು re-ನಾಮಕರಣ ಮಾಡಿ ಪುಣ್ಯ ಗಳಿಸಿರಬಹುದು!  

ಮೊದಲೇ ನೋಡಿ ಪರಿಚಯವಿದ್ದ, ಹತ್ತಿರದಿಂದ ನೆಂಟರೂ, ಅಮ್ಮನಿಗೆ ಕೃಷಿ ವಿಚಾರಗಳಲ್ಲಿ ಮಾರ್ಗದರ್ಶಿಯೂ ಆಗಿದ್ದ ಹೆಡ್ ಮಾಷ್ಟ್ರು , ಗೋಳ್ತಜೆ ಸದಾಶಿವಯ್ಯ ಅಮ್ಮನಲ್ಲಿ "ಇದರ ಇನ್ನು ಶಾಲೆಗೆ ಸೇರ್ಸುಲಕ್ಕಪ್ಪ!" ಎಂದರು.ಆಗ ಜೂನ್ ಒಂದರ ಮೊದಲು ೫ ವರ್ಷ ಪೂರ್ತಿಯಾದವರನ್ನು ಮಾತ್ರ ಶಾಲೆಗೆ ಸೇರಿಸಿಕೊಳ್ಳುತ್ತಿದ್ದರು.ಆದರೆ ಜೂನ್ ೧ರ ನಂತರ ಹುಟ್ಟಿದ್ದ ನಾನು ಪೂರ್ತಿ ಇನ್ನೊಂದು  ವರ್ಷ ಕಾಯುವ ಅಗತ್ಯವಿತ್ತು. ಆದರೆ ನನ್ನ ಕಿತಾಪತಿಗಳನ್ನು ನೋಡಿದ್ದ ಅವರು "ಅದಿಕ್ಕೆ ಕಲ್ತುಕೊಂಬ್ಲೆ ಎಡಿಗು, ಏನೂ ತೊಂದ್ರೆ ಇಲ್ಲೆ" ಅಂದೇ ಬಿಟ್ಟರು.ಹಾಗೆ ನನಗೂ ಮೇ ತಿಂಗಳಲ್ಲಿ ಹೊಸ ಹುಟ್ಟುಹಬ್ಬ ಸಿಕ್ಕು ಶಾಲೆಗೆ ಸೇರಿದೆ .

ಆಗೆಲ್ಲ ಯುನಿಫಾರ್ಮ್ ಇರಲಿಲ್ಲ. ನಮ್ಮ ಬಟ್ಟೆಯನ್ನೇ ಹಾಕಿದರಾಯಿತು. ಒಂದು ಚೀಲ. ಅದರೊಳಗೆ ಒಂದು ಪ್ರಿಂಟೆಡ್ ಪುಸ್ತಕ. ಒಂದು ಸ್ಲೇಟ್, ಒಂದೆರಡು ಕಡ್ಡಿ, ಸ್ಲೇಟ್ ವರೆಸಲು ಚಿಂದಿ ಬಟ್ಟೆ, ಮತ್ತು  "ಪೀಟ್ರುಕೋಲು" (ಫೂಟ್ ರೂಲರ್). ಒಂದು ವಾಟ್ರ್ ಕೇನ್ ಹಾಗೂ ಊಟಕ್ಕೆ ಮನೆಗೆ ಹೋಗದಿದ್ದರೆ ಬುತ್ತಿ. ಪಾದರಕ್ಷೆ ಇದ್ದರೂ ಸರಿ ಇಲ್ಲದಿದ್ದರೂ ಅಡ್ಡಿಯಿಲ್ಲ. ಹೇಗಿದ್ದರೂ ತರಗತಿಯೊಳಗೆ ಚಪ್ಪಲಿ ಹಾಕುವವರು ಸರ್ , ಟೀಚರ್ ಮಾತ್ರ.

ನನ್ನಮ್ಮ ಸೈಂಟ್ ಆನ್ಸ್ ಎಂಬ ಕಾನ್ವೆಂಟ್ ಶಾಲೆಯಲ್ಲಿ ಓದಿ ಆ ಕಾಲಕ್ಕೆ ಪ್ರತಿಷ್ಠಿತ ಬೆಸೆಂಟ್ ಕಾಲೇಜಿನಲ್ಲಿ ಓದಿದಾಕೆ. ಸಲೀಸಾಗಿ ಇಂಗ್ಲಿಷ್ ಮಾತಾಡುವ ಬರೆಯುವ ನೈಪುಣ್ಯ ಇದ್ದವಳು. ಈ ಶಾಲೆಗೆ ನನ್ನನ್ನು ಸೇರಿಸಿ ನನ್ನ ಓದು ಹಾಗೂ ನಡವಳಿಕೆಗಳಿಗೆ ಹೊಂದಿಕೊಳ್ಳಲು ಬಹಳ ಶ್ರಮಪಟ್ಟಿರಬೇಕು ಪಾಪ.


ನಾನು ಶಾಲೆಯಲ್ಲಿ ಕಲಿತ ಹೊಸ ಪದಗಳನ್ನು ಹೆಮ್ಮೆಯಿಂದ ಮನೆಯಲ್ಲಿ ಬಂದು ಪ್ರಯೋಗಿಸಿ ಪ್ರದರ್ಶಿಸ ಹೊರಟರೆ ಅಮ್ಮ ಯಾವಾಗಲೂ ಅದನ್ನು ತಿದ್ದಿ ನನ್ನ ಉತ್ಸಾಹಕ್ಕೆ ತಣ್ಣೀರು ಎರೆಯುತ್ತಿದ್ದಳು.
'ಪೀಟ್ರ್ ಕೋಲು' ಅಲ್ಲವಂತೆ, ಅದು 'ರೂಲರ್' ಅಂತೆ. ಹಾಗೆ ನಾನು ಶಾಲೆಗೆ ಹೋಗಿ ಹೇಳಿದರೆ, ಛೆ! ನನ್ನ ಹೊಸ ಗೆಳತಿಯರೆಲ್ಲ ನಕ್ಕಾರು!  ಒಂದನೇ ಕ್ಲಾಸಿನ ನನಗೂ ಅಮ್ಮನಿಗೂ ಇಂಥಾ ವಿಚಾರದಲ್ಲಿ ಎಷ್ಟು ಚರ್ಚೆ ಆಗುತ್ತಿತ್ತು ಅಂದರೆ ಕೊನೆಗೆ ಅಮ್ಮನೇ ಸೋತು  ನಕ್ಕರೆ ಅದಕ್ಕೂ ವಿಪರೀತ ಅವಮಾನವಾಗುತ್ತಿತ್ತು.


ಹೇಮಾವತಿ - ನಮ್ಮೆಲ್ಲರಿಗಿಂತ ಎತ್ತರದವಳು. ಅವಳೆಂದರೆ ನಮಗೆಲ್ಲ ಅಚ್ಚುಮೆಚ್ಚು. ಅವಳ ಬಳಿ ಕುಳಿತುಕೊಳ್ಳಲು, ನೀರು ಕುಡಿಯಲು ಹೋಗುವಾಗ ಕೈ ಕೈ ಹಿಡಿಯಲು, ಬೊಂಬೆ ಆಟ ಆಡುವಾಗ ನಾವೆಲ್ಲ ಅಮ್ಮಂದಿರಾದರೆ ಅಜ್ಜಿಯಾಗಲು ಅವಳೇ ಬೇಕು. ಕಾಪಿ ಬರೆಯಲು ಸ್ಲೇಟ್ ನಲ್ಲಿ ನೀಟಾಗಿ ಗೆರೆ  ಎಳೆಯಬೇಕಲ್ಲ. ನಮ್ಮದೆಲ್ಲ ಓರೆಕೋರೆಯಾಗುತ್ತಿತ್ತು. ಅದಕ್ಕೆ ಹೇಮಾವತಿಗೆ ದಮ್ಮಯ್ಯ ಹಾಕುತ್ತಿದ್ದೆವು. ಅಂಥಾ influence   ಹೊಂದಿದ್ದ ಆಕೆ ಏನು ಮಾಡಿದರೂ ಹೇಳಿದರೂ ಸರಿಯೇ ಅಲ್ಲವೇ?! ಅವಳ famous line  : "ನನಗೆ ಅದೊಂದು  ಮಾತ್ರ ಅಸಾಧ್ಯವೇ ಇಲ್ಲ!" - 'ನನಗೆ ಆ ಕೆಲಸ ಮಾಡಲು ಸಾಧ್ಯವೇ ಇಲ್ಲ' ಎಂದು ಅವಳು ಹೇಳುತ್ತಿದ್ದುದು ಹೀಗೆ.

ಈ ಪ್ರಯೋಗಕ್ಕೆ ಮನೆಯಲ್ಲಿ ಅಮ್ಮನ ಕಟುಟೀಕೆ. ನನಗೆ ದು:ಖ - "ನನ್ನ ಗೆಳತಿಯರೆಂದರೆ ನಿನಗಾಗದು. ಅವರು ಏನು ಹೇಳಿದರೂ ನೀನು ಸರಿಯಿಲ್ಲ ಅನ್ನುತ್ತೀ" ಎಂದು.

ಕೊನೆಗೂ ಅಪ್ಪ ಬಂದಾಗ  ಅವರ ತೀರ್ಮಾನಕ್ಕೆ ನಾನು  ಒಪ್ಪಿ ತಿದ್ದಿಕೊಳ್ಳಲೇ ಬೇಕಾಯ್ತು.








Thursday 5 April 2012

ಸೀರೆ ಸೆರಗು ಹೊದ್ದ ಇಂದಿರಕ್ಕ !


ಅಮ್ಮನ ತವರುಮನೆಯವರೆಲ್ಲ ಸಾಯಿಬಾಬಾ ಭಕ್ತರು. ಸಾಯಿಬಳಗದ ಶಿಸ್ತು ಅವಳ ರಕ್ತದಲ್ಲೇ ಹರಿಯುತ್ತಿತ್ತೇನೋ! ಗಂಡಸರೊಂದಿಗೆ ವ್ಯವಹರಿಸುವಾಗಲೇ ಇರಲಿ (ಈ ಬಗ್ಗೆ ಮುಂದೆ ಬರೆಯುವೆ), ಎಲ್ಲಿ ಹೋದರು ಸಾಧ್ಯವಾದ ಕೆಲಸದಲ್ಲಿ ಸಹಕರಿಸುವುದಿರಲಿ , ಸೀರೆ ಸೆರಗು ಹೊದ್ದುಕೊಂಡಿರುವುದರಲ್ಲೂ ಇದು ಗಣನೆಗೆ ಬರುತ್ತಿತ್ತು .

 ಅಮ್ಮ ಊರಿಗೆ ಬಂದ ಹೊಸತರಲ್ಲಿ ಇದು ಯಾರಿಗೂ ವಿಶೇಷ ಅನ್ನಿಸಿರಲಾರದು. ಮುಂದೆ ನಿಧಾನವಾಗಿ ಸಮಾಜ ಬದಲಾಯಿತು. ಎಲ್ಲರ ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತಿದ್ದ ಕಾಲ. ಬಣ್ಣ ಬಣ್ಣದ ಸೀರೆಗಳನ್ನು ಕೊಂಡುಕೊಳ್ಳುವವರು ಹೆಚ್ಚಾದರು. ಸೆರಗು ಹೊದ್ದು ಓಡಾಡುವುದು 'ಔಟ್ ಆಫ್ ಫ್ಯಾಶನ್' ಅನ್ನಿಸಿಕೊಂಡಿತು!

ಆದರೂ 'ಈ ಇಂದಿರಕ್ಕ ಇನ್ನೂ ಸೆರಗು ಹೊದ್ದುಕೊಂಡೇ ಹೋಪುದು!' ಎಂದಾಯಿತು.

ವ್ಯವಹಾರಕ್ಕೋಸ್ಕರ ಅಮ್ಮನ ಓಡಾಟ ಅಗತ್ಯವೇ ಆಗಿತ್ತು.

 ಒಂಟಿ ಹೆಂಗಸು ಕಾರುಭಾರ ಮಾಡುವುದರಿಂದ - ಸುರಕ್ಷತೆಯ ದೃಷ್ಟಿಯಿಂದ - ಮನೆಗೇ ಬಂದು ಅಡಿಕೆ ಕೊಂಡುಹೋಗುತ್ತಿದ್ದ ಮುಸಲ್ಮಾನ ವರ್ತಕರಿಗೆ ಎಂದೂ ಮಾರಾಟ ಮಾಡುತ್ತಿರಲಿಲ್ಲ. ಆಕೆಯ ಅಪ್ಪಯ್ಯನಿಗೆ ಅಡಿಕೆ ಬಂಡಸಾಲೆ ಇದ್ದುದೂ ಕಾರಣವಾಗಿರಬಹುದು .

ಅಡಿಕೆ ಮಾರಾಟಕ್ಕೆ ಪುತ್ತೂರು ಮಂಗಳೂರಿಗೆ;ಗೊಬ್ಬರ ತರಿಸಲು , ಮನೆ ಖರ್ಚಿಗೆ ದಿನಸಿ , ಅಪರೂಪಕ್ಕೆ ಪೇಟೆ ತರಕಾರಿಗಾಗಿ ಅವಳು ಹೋಗುವುದು ಅನಿವಾರ್ಯ. ಇಲ್ಲದಿದ್ದರೂ ಕಲ್ಮಡ್ಕ ಪೇಟೆಯ ಸೊಸೈಟಿಗಾದರೂ ಹೋಗಬೇಕಿತ್ತು.

ಇಷ್ಟು ಓಡಾಟಕ್ಕೆ ಅವಳಲ್ಲಿ ಹಲವು ಸೀರೆಗಳೂ ಇದ್ದವು. ಅವಳ ಪ್ರೀತಿಯ ತಂಗಿಯರು ವಿದೇಶದಿಂದ ತಂದುಕೊಡುತ್ತಿದ್ದುದು. ಅವು ಎಷ್ಟು ಬಾರಿ ತೊಳೆದು ಉಟ್ಟರೂ ಹರಿಯುತ್ತಿರಲಿಲ್ಲ - ಅಂಥ ಉತ್ತಮ ಗುಣಮಟ್ಟದವು. ಚಂದದ ಚಿತ್ತಾರದವು. ಎಲ್ಲ ಸರಿ - ಆದರೆ ಅದನ್ನು 'ಸ್ಟೈಲಾಗಿ'  ಪಿನ್ ಚುಚ್ಚಿ ಉಡಬಾರದೆ !

 ಈ ಬಗ್ಗೆ ಎಲ್ಲರ ಗಮನ ಹೋಗುತ್ತಿದ್ದುದರ ಸೂಕ್ಷ್ಮ ನನಗೂ ಅರ್ಥವಾಗತೊಡಗಿತು.  ಅವಳ ಆಪ್ತರೂ ಮೆತ್ತಗೆ ಹೇಳತೊಡಗಿದರೆ ಅಮ್ಮ ಶಾಂತವಾಗಿ ಮುಗುಳ್ನಕ್ಕು "ಈ ವರ್ಷ ಕಾಟು ಮಾವಿನ ಮರ ಫಲ ಹೋಯಿದ?" ಅಂತೇನೋ ಮಾತು ಬದಲಿಸುತ್ತಿದ್ದಳು.

 ನಾನು ಹೈಸ್ಕೂಲ್ ಓದುತ್ತಿದ್ದೆ. ಉಡುಪು ತೊಡುಪಿನ ಬಗ್ಗೆ ನನ್ನ ಅರಿವು, ಆಸಕ್ತಿ ಹೆಚ್ಚಾಗಿತ್ತು. ಅಮ್ಮನನ್ನು ಎಲ್ಲಾ ಆಡಿಕೊಳ್ಳುತ್ತಾರೆ ಎಂಬ ನನ್ನ ಚಿಂತೆ ದಿನದಿನಕ್ಕೆ ಹೆಚ್ಚಾಯಿತು. ಒಮ್ಮೆ ಕೇಳಿಯೇ ಬಿಟ್ಟೆ "ನೀನು ಯಾಕೆ ಹಳೆ ಕಾಲದವರ ಹಾಂಗೆ ಹೋಪುದು ?" ಎಂದು. ಅಮ್ಮನಿಗೂ ಹಂಚಿಕೊಳ್ಳುವುದು ಬೇಕಿತ್ತೇನೋ. ಹೇಳಿದಳು - "ಈಗ ಎಲ್ಲವೂ ಮ್ಯಾಚಿಂಗ್ ರವಿಕೆಯೇ ಹಾಕುತ್ತವು. ಎನ್ನತ್ರ ಎಲ್ಲ ಸೀರೆಗೂ ಮ್ಯಾಚಿಂಗ್ ಇಲ್ಲೆ. ಸೆರಗು ಹೊದ್ರೆ ಯಾವ ಬಣ್ಣದ ರವಿಕೆ ಆದ್ರೂ ಆಗ್ತು" ಎಂದು.

 ಕಲ್ಮಡ್ಕದ ಹಳ್ಳಿಯಿಂದ ಪೇಟೆಗೆ ಹೋಗಿ, ಪ್ರತೀ ಸೀರೆಗೂ ಮ್ಯಾಚಿಂಗ್ ಹುಡುಕಿ , ಅಮ್ಮನ ಗೆಳತಿ ಶರಾಳ ಬಳಿ ಹೊಲಿಸಿಕೊಂಡು - ಅದು ಸಿಕ್ಕು - ಅಮ್ಮ 'ಮಾಡರ್ನ್' ಆಗುವ ಸಾಹಸ ಎಣಿಸಿಯೇ ನನಗೆ ಪರಿಸ್ಥಿತಿ ಅರ್ಥವಾಯಿತು. ಅವಳಲ್ಲಿ ಇಷ್ಟೆಲ್ಲಾ ಮಾಡಲು ಸಮಯದ ಅಭಾವವೂ ಇತ್ತು, ಪ್ರತಿಯೊಂದಕ್ಕೂ ಲೆಕ್ಕ ಇಡಬೇಕಾದ ಅನಿವಾರ್ಯತೆಯಿಂದ ಒಂದು ರೀತಿಯ ಆರ್ಥಿಕ ಮುಗ್ಗಟ್ಟೂ ಇತ್ತು.

ಸಮಜಾಯಿಷಿ ಹೇಳುವುದರಿಂದ, ನಕ್ಕು ವಿಷಯ ತೇಲಿಸುವುದು ಹಗುರ ಎಂದು ಅನುಭವದಿಂದ ಕಂಡುಕೊಂಡಿದ್ದಳು..

ಆದರೊಂದು ಮಾತು - ಇಂಟರ್ನೆಟ್ , ಟಿವಿ ಇಲ್ಲದ ಕಾಲದಲ್ಲೂ ಕೇವಲ ಪುಸ್ತಕ-ಪತ್ರಿಕೆಗಳ ಮೂಲಕ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ updated  ಆಗಿದ್ದ ಆಕೆ ಎಲ್ಲರಿಂದ ಹೆಚ್ಚು 'ಮಾಡರ್ನ್' ಆಗಿಯೇ ಇದ್ದಳು. ಗುರುತಿಸುವವರು ಇರಲಿಲ್ಲ ಅಷ್ಟೇ..

 ಜ್ಞಾನತೃಷೆಗೆ  'ಗುರುತಿಸಿಕೊಳ್ಳುವಿಕೆ'ಯ ಅಗತ್ಯವೂ ಇಲ್ಲ ಅನ್ನಿ.




ಕತೆಗಳ ಸುಂದರ ರಾಜ್ಯ !


ಅಮ್ಮ ತುಂಬಾ ಕತೆ ಹೇಳುತ್ತಿದ್ದಳು. ಕೆಲವು ಅವಳ ನೆನಪಿನಿಂದ ತೆಗೆದವು. ಹಲವು ಅವಳ ಬಾಲ್ಯದಲ್ಲಿ ಕತೆ ಹೇಳುವ ಅಜ್ಜಿ  - ಅವಳ 'ಪರಿಯಂಬಿ ಹೆರಿಯಮ್ಮ'  ಹೇಳಿದ್ದನ್ನು ವಿವರಿಸುತ್ತಿದ್ದಳು. 'ಅಮರ ಚಿತ್ರ ಕಥೆ ' ಪುಸ್ತಕಗಳು ನಮಗೆ ಅಚ್ಚುಮೆಚ್ಚು. ಪೇಟೆಗೆ ಹೊರಡುವಾಗ 'ಎಂತ ತರೆಕು?' ಎಂದರೆ ನಾನು ಥಟ್ಟನೆ ಹೇಳುತ್ತಿದ್ದುದು ಈ ಪುಸ್ತಕಗಳನ್ನು.

 ಅಮ್ಮ ಕತೆ ಓದುತ್ತಿದ್ದ ರೀತಿಯೇ ಚಂದ. ಸ್ವರಗಳ ಏರಿಳಿತ, ಒಬ್ಬೊಬ್ಬನ ಮಾತಿಗೂ ಒಂದೊಂದು ಶೈಲಿ - ಪಿಸು ಮಾತಲ್ಲಿ, ಕೆಲವೊಮ್ಮೆ ಜೋರಾಗಿ, ಅಳು-ನಗು-ಕೋಪ ಅಭಿವ್ಯಕ್ತಿಗೊಳಿಸುತ್ತಾ ತುಂಬಾ ರಸವತ್ತಾಗಿ ಹೇಳುತ್ತಿದ್ದಳು.
 ರಷ್ಯನ್ ಪ್ರಕಾಶನದ ಪುಸ್ತಕಗಳ ಪ್ರದರ್ಶನದಿಂದ ತಂದ ಕೆಲವಂತೂ ಇನ್ನೂ ನೆನಪಿದೆ.
ದೊಡ್ಡ ಕರಡಿ, ಹದಾ ಕರಡಿ, ಪುಟ್ಟು ಕರಡಿ  ಕತೆ ಎಷ್ಟು ಕೇಳಿದರೂ ಸಾಲುತ್ತಿರಲಿಲ್ಲ!

ಅಪ್ಪನೂ ತುಂಬಾ ಸೊಗಸಾಗಿ ಕತೆ ಹೇಳುತ್ತಿದ್ದರು. ಕುಮಾರ ವ್ಯಾಸನ ಗದುಗಿನ ಭಾರತ ಅವರಿಗೆ ಅತಿ ಪ್ರಿಯ! ರಜೆಯಲ್ಲಿ ಊರಿಗೆ ಬಂದಾಗ ಸಾಯಂಕಾಲದ ಕಾಫಿ ಕುಡಿದ ನಂತರ ಕೆಲಸದವರೆಲ್ಲ ಮನೆಗೆ ತೆರಳಿದ ಮೇಲೆ - ಕರೆಂಟ್ ಇದ್ದರೆ - ಅಮ್ಮ ದೊಡ್ಡ ಕಪಾಟಿನಲ್ಲಿ ಜೋಪಾನವಾಗಿಟ್ಟ ಪುಸ್ತಕ ಹೊರತೆಗೆದು ಅಪ್ಪನಿಗೆ ಕೊಡುವಳು. ನನ್ನದು ಯಾವತ್ತೂ ಒಂದೇ ಡಿಮ್ಯಾಂಡು - "ಭೀಮ ಬಕಾಸುರನ ಕೊಂದ ಕತೆ ಹೇಳಿ!" ಎಂದು. ಅಪ್ಪ ಕುಮಾರ ವ್ಯಾಸನ ಪದ್ಯಗಳನ್ನು ರಾಗವಾಗಿ ಓದಿ, ಚೆನ್ನಾಗಿ ವಿವರಿಸುತ್ತಿದ್ದರು! ಕಾವಿಯ ಕೆಂಪು ತಂಪು ನೆಲದ ಮೇಲೆ ಉದ್ದಕ್ಕೆ ಕವುಚಿ ಮೈಚಾಚಿ ಮಲಗಿ ಓದುತ್ತಿದ್ದ ಅಪ್ಪನ ಕಾಲಮೇಲೆ ಕೂತು ಭೀಮನ ಸಾಹಸದ ಚಿತ್ರಣವನ್ನು ಎಣಿಸುತ್ತಾ ಎಲ್ಲವನ್ನೂ ಮರೆಯುತ್ತಿದ್ದೆ. ಬಂಡಿಯಲ್ಲಿ  ತುಂಬಿದ್ದ ಬಗೆಬಗೆ ತಿನಿಸುಗಳು, ಭೀಮ ಅದನ್ನು ಸವಿಯುವ ರೀತಿ, ಬಕಾಸುರ ಮರ ಮುರಿದು ಹೊಡೆಯುವಾಗ ತೇಗಿದ ತೃಪ್ತ ಭೀಮ..
 ಅಮ್ಮ ದೇವರಿಗೆ ದೀಪ ಹಚ್ಚಿ, ಕತೆಯ ಮಧ್ಯೆ ಬಂದು ಮಹಾಭಾರತದ ಬಗ್ಗೆ ಏನೋ ಪ್ರಶ್ನೆ ಕೇಳಿ ಅಪ್ಪನ ಉತ್ತರ ಪಡೆದು ಮತ್ತೆ ಊಟದ ತಯಾರಿಗೆ ಹೋಗುವಳು..

ಅಪ್ಪನಿಗೆ ಹೋಲಿಸಿದರೆ ಅಮ್ಮನದು  ಹೊಸ ರೀತಿಯ ಕತೆಗಳು. ಪಂಚತಂತ್ರದ ಕತೆಗಳು, ರಜಪೂತ ರಾಜ ರಾಣಿಯರದು, ಬಟಾಣಿ ಬಳ್ಳಿ ಏರಿದ ಸಾಹಸಿಯದು,  ಸಿಂಡರೆಲಾ ತರಹದ ರಾಜಕುಮಾರಿಯರದು..

ಎಷ್ಟೋ ವರ್ಷ ಕಳೆದು ನಾನು ಹಾಸ್ಟೆಲ್ ಸೇರಿದ ಮೇಲೆ ಅಪರೂಪಕ್ಕೆ ಮನೆಗೆ ಬಂದಾಗ ಅಮ್ಮನ ಜುಟ್ಟು ಸಡಿಲಿಸಿ ಕೆಳಗಿಳಿದ  ಸಪುರ ಉದ್ದದ ಜಡೆ ತಿರುಗಿಸುತ್ತಾ, ಕುಶಾಲಿಗೆ 'ಕತೆ ಹೇಳಮ್ಮ!' ಅನ್ನುತ್ತಿದ್ದೆ. ಅವಳ ಶೈಲಿಯಲ್ಲಿ ಕೇಳಲು ಆಸೆ ನನಗೆ. ನಾಚಿ, ನಕ್ಕು ವಿಷಯ ಬದಲಿಸುತ್ತಿದ್ದಳು.

ಅವಳು 'ಅಜ್ಜಿ'ಯಾಗಿ ಮೊಮ್ಮಕ್ಕಳಿಗೆ ಕತೆ ಹೇಳುವುದನ್ನು ಕೇಳುವ ಭಾಗ್ಯ ನಮ್ಮದಾಗಲಿಲ್ಲ.. ಅವಳ ಸುದ್ದಿ ಕೇಳಿದ್ದ ನನ್ನ  ಪುಟಾಣಿ ಮಗಳು ತಾನು ಅಜ್ಜಿಯನ್ನು ನೋಡಲೇ ಇಲ್ಲ ಅಂತ ಅಳುವಾಗ ಮನಕೆ ಮಂಕು ಹಿಡಿದದ್ದು ಸಹಜ.

ನನ್ನವರ ಸೋದರತ್ತೆ  ಬಂದವರು, ಪ್ರೀತಿಯಿಂದ ತಮ್ಮ ಬಾಲ್ಯದ ನೆನಪಿನ ಹಲವು ಕತೆಗಳನ್ನು ಹೇಳಿ ತಂಪೆರೆದದ್ದು   ಮರೆಯುವಂತಿಲ್ಲ !



  

Sunday 25 March 2012

ಆನೆ ಬಂತೊಂದಾನೆ !


ನಿನ್ನೆ ತವರಿನ ನೆನಪಾಗಿ ಅಣ್ಣ ಅತ್ತಿಗೆಯ ಬಳಿ ಮಾತಾಡಿದೆ.
ಅಣ್ಣ ಪಶುವೈದ್ಯಕೀಯದಲ್ಲಿ ತರಬೇತಿ ಪಡೆದು ಕೆನಡಾದ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ಮಾಡುತ್ತಿದ್ದವನು. ಅತ್ತಿಗೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಪದವಿ ಗಳಿಸಿದಾಕೆ. ಇಬ್ಬರೂ ನನ್ನ ಅಪ್ಪನಿಗೆ "ಸೆರೆಬ್ರಲ್ ಆಟ್ರೋಫಿ", ನಿಧಾನವಾಗಿ ಕ್ಷೀಣವಾಗುವರು ಎಂದು ತಿಳಿದ ಕೂಡಲೇ ಊರಿಗೆ ಹಿಂದಿರುಗಿದವರು. ಹಾಸಿಗೆ ಹಿಡಿದ ಅಪ್ಪನನ್ನು
ನೋಡಿಕೊಂಡು, ತೋಟದ ಕೃಷಿಕಾರ್ಯಗಳನ್ನೂ ಕರಗತಗೊಳಿಸಿಕೊಂಡವರು.  ಹಳ್ಳಿಯ ಜೀವನದ ಹೊಸ ಹೊಸ challenges ನ್ನು ತಮ್ಮದೇ ರೀತಿಯಲ್ಲಿ ಎದುರಿಸುತ್ತಾ ಬಂದ ಅವರ  ಬಗ್ಗೆ  ಗೌರವಪೂರ್ಣ ಬೆರಗು, ಆದರ ನನಗೆ.

ನಿನ್ನೆ ಅತ್ತಿಗೆ ಮಾತಾಡುತ್ತಾ "ನಮಗೆ ಇಲ್ಲಿ ಬಗೆಬಗೆಯ adventures !" ಎಂದಳು.

ಬೆಳಗ್ಗೆ  ಮನೆಗೆ ಬರುವ ಗೇಟಿನ ಪಕ್ಕದಲ್ಲಿ ನಡೆದು ಹೋಗಲು ಬಿಟ್ಟ ಸಣ್ಣ ದಾರಿಯ ಗೋಡೆ ಮುರಿದುಬಿದ್ದಿದೆ. ಮಳೆಯಿಲ್ಲ ಗಾಳಿಯಿಲ್ಲ - ಹೇಗಾಯಿತು?! ಪಕ್ಕದ ಮನೆ ಅಕ್ಕ ಫೋನ್ ಮಾಡಿ 'ನಿಂಗಳ ತೋಟಕ್ಕೂ ಆನೆ ಬಂದಿದಾ?' ಎಂದು ಕೇಳಿದಾಗಲೇ ಹೊಳೆದದ್ದು!

ರಾತ್ರಿ ಗೂಡಿನಿಂದ ನಾಯಿ ನಿರಂತರವಾಗಿ ಬೊಗಳಿದಾಗ  ಅಣ್ಣ ಎರಡೆರಡು ಬಾರಿ ಎದ್ದು  ಟಾರ್ಚ್  ಲೈಟ್ ಬಿಟ್ಟು ನೋಡಿದ್ದಾಗಿತ್ತು.  ಏನೂ ಕಾಣದೆ  'ಹೆಗ್ಗಣ ಆಗಿರೆಕ್ಕು ' ಎಂದುಕೊಂಡು ಮಲಗಿದ್ದನಂತೆ.

ಈಗ ರಹಸ್ಯ ಬಯಲಾಯಿತು. ಅತ್ತಿಗೆ ಪತ್ತೆದಾರಿಕೆ ಮಾಡಿ ಕಂಡುಕೊಂಡಳು - ಅದು ತೋಟದ ಬದಿಯ ನೀರು ಹೋಗುವ ಕಾಲುವೆಯನ್ನೇ   (ನಮ್ಮ ಮಾತಿನಲ್ಲಿ 'ತೋಡು') ಹೆದ್ದಾರಿಯನ್ನಾಗಿಸಿಕೊಂಡು ಪಕ್ಕದ ತೋಟಕ್ಕೆ ನುಗ್ಗಿದೆ. ಕಿಲೋಮೀಟರ್   ದೂರದಲ್ಲೇ ಇರುವ ಕಾಡಿನಿಂದ ದಾರಿ ತಪ್ಪಿ ಬಂತೋ, ತಿನ್ನಲೇನಾದರೂ ಸಿಗುತ್ತೋ ಅಂತ ಪರಿಶೀಲನೆ ಮಾಡಲು
ಬಂತೋ ಇನ್ನೂ ತಿಳಿದಿಲ್ಲ. 'ಬಂದಿದ್ದೇನೆ' ಎನ್ನಲು ಸಾಕ್ಷಿಗೋ ಎಂಬಂತೆ ಲದ್ದಿಯಂತೂ ಹಾಕಿ ಹೋಗಿದೆ.
   
ನಮ್ಮ ತೋಟಕ್ಕೆ, ಊರಿಗೆ ಆನೆ, ಕಾಡುಹಂದಿ ಬರುವುದು ಹೊಸದೇನೂ ಅಲ್ಲ. ಅಮ್ಮ ಊರಿಗೆ ಬಂದು ಕೃಷಿ ಶುರು ಮಾಡಿದ ಕಾಲಕ್ಕೆ ಸುತ್ತೆಲ್ಲ ಇನ್ನೂ ದಟ್ಟ ಕಾಡು ಇತ್ತಂತೆ. ಗದ್ದೆಯಲ್ಲಿ ಭತ್ತದ ಒಂದು ಬೆಳೆಯಾದ ಬಳಿಕ ತರಕಾರಿ ಹಾಕುತ್ತಿದ್ದರಂತೆ. ಊರಿಗೆ ನುಗ್ಗಿದ ಕಾಡುಪ್ರಾಣಿಗಳ ಹಿಂಡು ಆ ನಟ್ಟಿಕಾಯಿ ಸಾಲುಗಳಲ್ಲಿ ಓಡಾಡಿ, ತೋಟದ ಬಾಳೆಗಿಡಗಳನ್ನು ಚೆಲ್ಲಾಪಿಲ್ಲಿಮಾಡಿ ಹೋಗುತ್ತಿದ್ದವಂತೆ.

 ನನ್ನ ಕಾಲಕ್ಕೆ ಕಾಡು ಕಡಿಮೆಯಾಗತೊಡಗಿತ್ತು. ಆನೆಗಳೆಲ್ಲ 'employed ' ಆಗಿದ್ದವು. ಮರಕಡಿದು ಸಾಗಿಸುವ ವರ್ತಕರೆ ಆನೆಗಳ ಒಡೆಯರು. ಅವು 'ಮರ ಎಳೆಯುವುದನ್ನು' ನೋಡುವುದೇ ಒಂದು ಮೋಜು ಆಗ.

1980 ರ ಜೂನ್ ತಿಂಗಳು.  ನನ್ನನ್ನು ಶಾಲೆಗೆ ಸೇರಿಸಬೇಕು ಎಂದುಕೊಂಡು ಅಮ್ಮ ಕಲ್ಮಡ್ಕಕ್ಕೆ  ಕರೆದುಕೊಂಡು  ಹೋಗಿದ್ದಳು.  ಸ್ವಚ್ಛಂದ ಜೀವನಕ್ಕೆ ಒಗ್ಗಿಕೊಂಡಿದ್ದ ನನಗೆ ಶಾಲೆ ಬೇಕಾಗಿರಲಿಲ್ಲ. ಊರಿಗೆ ಬಂದ ಅಕ್ಕನೂ ಇದ್ದಾಗ 'ಎಲ್ಲಾ ಗಮ್ಮತ್ತು ಬಿಟ್ಟು ಹೋಯೆಕ್ಕಾ ?!' ಎಂದು ಅಳುಮೊಗದಲ್ಲೇ ಇದ್ದೆ. ಕಲ್ಮಡ್ಕ ಪೇಟೆಯೆಲ್ಲ ಗುಸು ಗುಸು - "ಆನೆ ಬಪ್ಪುದಡ ! ಮರ ಎಳಿಲೆ ! ಹಾಸಡ್ಕದ ಹತ್ರಕ್ಕೆ..  "  ಅದು ಕೇಳಿದ ಮೇಲೆ ಇನ್ನೇನು ಬೇಕು ! ಏನೆಲ್ಲಾ ಪ್ರಯತ್ನ ಮಾಡಿ, ಗುಡುಗು-ಮಿಂಚು-ಮೋಡ-ಮಳೆಗರೆದು  ಅಂತೂ ಇಂತೂ ಅಮ್ಮನಿಗೂ ಮನ ಕರಗಿತು. ಪೇಟೆಯಲ್ಲಿದ್ದ ಅಕ್ಕನಿಗೂ ಹೊಸ ನೋಟ - ಅನುಭವ ಎಂದುಕೊಂಡು ಹೊರಡುವ ಮನಸ್ಸು ಮಾಡಿದಳು ..

ಆದರೆ ಹಾಸಡ್ಕ ಏನು ಹತ್ತಿರವೇ?  ಮೂರು ಮೈಲಿ  ದೂರದ ಅಲ್ಲಿಗೆ ನೇರ ಮಾರ್ಗವಿದ್ದರೂ ಬಸ್ ಸಂಚಾರ ಆಗಲೂ ಇರಲಿಲ್ಲ ಈಗಲೂ ಇಲ್ಲ. ಈಗಿನಂತೆ ಮನೆಮನೆಯಲ್ಲಿ ವಾಹನ ಸೌಕರ್ಯ ಇಲ್ಲದಿದ್ದ ಕಾಲ. ನಡೆದೇ ಹೋಗುವುದು ರೂಢಿ. ನನ್ನನ್ನು  ಅಷ್ಟು ದೂರ ನಡೆಸಿಕೊಂಡು  ಹೋಗುವುದು 'ಅಪ್ಪ ಹೋಪ' ಕೆಲಸ ಅಲ್ಲ! ಅಮ್ಮನಿಗೆ  ಹೆಚ್ಚು ದೂರ ಎತ್ತಿಕೊಳ್ಳಲು ಆಗುತ್ತಿರಲಿಲ್ಲ. ಅನಾಥ ಬಂಧುವಂತೆ ಸಿಕ್ಕಿದ್ದು ನನ್ನ ಚಿಕ್ಕಪ್ಪ! ಸ್ವಲ್ಪ ದೂರ ನಡೆದು, ನಡೆಯುವುದಕ್ಕಿಂತ ಹೆಚ್ಚು ವಟಗುಟ್ಟಿ ಸುಸ್ತಾದಾಗ,  ಪ್ರಸಾದ ಚಿಕ್ಕಯ್ಯನ  ಹೆಗಲ ಮೇಲೆ ಕೂತು 'ತೊಂಪಟ ತೊಂಪಟ' ಪ್ರಯಾಣ - ಆನೆ ನೋಡಲು!  ಅವನ ಭುಜ  ಎಷ್ಟು  ನೋವಾಯಿತೋ..  ಅದೆಲ್ಲ ಯೋಚನೆ ಮಾಡಲು ಆಗ ಬುದ್ಧಿ ಇರಲಿಲ್ಲ!

ದೊಡ್ಡ ಆನೆಗೆ - ಮಾವುತ ಏನೇನೋ  ಒದರುತ್ತಿದ್ದ , ತನ್ನ ಕಾಲಿನಲ್ಲಿ ಅದರ ಕಿವಿಗೆ ತಿವಿಯುತ್ತಿದ್ದ. ದೊಡ್ಡದೊಂದು ಮರದ ತುಂಡನ್ನು ತನ್ನ ಸೊಂಡಿಲಿನಲ್ಲಿ ತಳ್ಳುತ್ತಿತ್ತೋ ಎಳೆಯುತ್ತಿತ್ತೋ ನನಗಂತೂ ಸ್ಪಷ್ಟವಾಗಲಿಲ್ಲ. ದೃಶ್ಯ ನೋಡಲು ಬಹಳ ಮಂದಿ ಬಂದಿದ್ದರು. ಹಾಸಡ್ಕದಿಂದ ಬಂದವರ ಜೊತೆಗೊಂದು ಬೆಕ್ಕೂ ಸಹ! ಆ ನಿರ್ಭಯ ಪುಟಾಣಿ  ಆನೆಗೆ ತೀರಾ ಹತ್ತಿರ ಹೋಗಿ ಕುಣಿದಾಡುತ್ತಿತ್ತು. ಯಾವ ಕಲ್ಪನೆಯೂ ಇಲ್ಲದೇ ಸುಮ್ಮನೆ 'ಆನೆ ನೋಡ್ಲೆ ಹೋಯೆಕ್ಕು!' ಎಂದು ಹಠಹಿಡಿದಿದ್ದ ನನಗೆ ಒಟ್ಟಾರೆ ಈ  ದೃಶ್ಯ ತೀರಾ ಅನಿರೀಕ್ಷಿತ. ಆನೆಯ ಗಾತ್ರವೋ, ಮಾಹುತನ ಅರ್ಥವಾಗದ ಮಲಯಾಳದ ಮಾತುಗಳೋ, ನನಗಿಲ್ಲದ ಧೈರ್ಯದ ಬೆಕ್ಕಿನ ಮೇಲಿನ ದಿಢೀರ್ ಪ್ರೀತಿಯೋ - ನಡೆದು, ಎಲ್ಲರ ಕಿವಿ, ತಲೆ "ಕೊರೆದ" ಸುಸ್ತಿನ ಹಸಿವೋ ..

"ನೋಡಿದ್ದು ಸಾಕು.. ಹೋಪ!! " ಎಂದು ರಾಗ ಶುರು.. 

ಅಷ್ಟೆಲ್ಲಾ ಕಷ್ಟಪಟ್ಟು ಶಾಲೆ ತಪ್ಪಿಸಿ ಹೋಗಿ ಮಾಡಿದ್ದೇನು ?! ಎಲ್ಲಾ ಕೆಲಸ ಬಿಟ್ಟು ಮಗಳ ಕುಶಿಗೆಂದು ಬಂದ ಅಮ್ಮನಿಗೆ ಹೇಗಾಗಬೇಡ? ಹೆಗಲಲ್ಲಿ ಹೊತ್ತ ಇನ್ನೂ ವಿದ್ಯಾರ್ಥಿಯಾಗಿದ್ದ ಆ ಚಿಕ್ಕಪ್ಪನಿಗೆ ಎಷ್ಟು ಅನ್ಯಾಯ ..

 ಛೆ ಛೆ !  ನೆನೆದಾಗಲೆಲ್ಲ ಆ ಆನೆಯ ಗಾತ್ರದಷ್ಟು ನಾಚಿಕೆಯಾಗುತ್ತದೆ.

Saturday 24 March 2012

ಅಮ್ಮನ ಸಂಗ್ರಹ


 ನನ್ನಮ್ಮ ನಮಗೆಲ್ಲ ಪ್ರೀತಿಯ ಪ್ರಸಿದ್ಧ 'ಇಂದಿರಮ್ಮ';  ಸಾಮಾನ್ಯಳಲ್ಲ!
 (ಅವಳೀಗ ಇಲ್ಲಿ ಕುಳಿತಿದ್ದರೆ ನನ್ನ ಮಾತಿಗೆ ಮೆತ್ತಗೆ ಸದ್ದಿಲ್ಲದೇ, ತನ್ನ ಹಸುರು ಕಣ್ಣಲ್ಲೇ ನಗುತ್ತಿದ್ದಳು. )

ಅವಳ ಒಂದೊಂದು ಆಸಕ್ತಿಯೂ ನನಗೆ ಅದ್ಭುತವಾಗಿಯೇ ಕಾಣುತ್ತಿತ್ತು. ಎಲ್ಲವನ್ನೂ ಸಂಗ್ರಹಿಸುವುದು ಅವಳ ಅಭ್ಯಾಸ. ಹೂವಿನ ಗಿಡವಿರಬಹುದು, ಕಾಡುವೃಕ್ಷಗಳ ಪುಟಾಣಿ ಗಿಡಗಳಿರಬಹುದು, ಬಣ್ಣ ಬಣ್ಣದ ಹಕ್ಕಿ ಗರಿಗಳಿರಬಹುದು, ಉದಯವಾಣಿ-ತರಂಗ-ಸುಧಾದಲ್ಲಿ ಬಂದ ಲೇಖನಗಳಿರಬಹುದು, ಅಂಚೆ ಚೀಟಿಗಳಿರಬಹುದು,  'ನೆನಪಿ'ಗೆಂದು ಜೋಪಾನವಾಗಿಟ್ಟ ನಮ್ಮ ಬಾಲ್ಯದ ಉಡುಪುಗಳಿರಬಹುದು, ಇವಿಷ್ಟೇ ಅಲ್ಲ! ಕನಸು ಕಾಣುವ ವಯಸಿನ ನಾನು ಲಹರಿಯಲ್ಲಿ ಸದ್ದಿಲ್ಲದೆ ಬರೆದೆಸೆದ ಚಿತ್ರ , ಕವನಗಳೇ ಇರಬಹುದು - ಅವಳ ಸಂಗ್ರಹಾಲಯದಲ್ಲಿ..

ಅವಳ ಈ ವಿಶಿಷ್ಟ ವಿದ್ಯೆಯ ಸುದ್ದಿ ಎಲ್ಲವನ್ನೂ ಒಂದೇ ಸಲ ಹೇಳಿ ಹಗುರಾಗುವುದು ಅಸಾಧ್ಯ!  ಇವತ್ತಿಗೆ ಇದು :

ನನ್ನ ಚಿಕ್ಕಮ್ಮನಿಗೆ ಮದುವೆ ಗೊತ್ತಾಗಿತ್ತು. ವಿದೇಶದಲ್ಲಿದ್ದ ಆಕೆ. ವಿದೇಶದಲ್ಲಿದ್ದ ಆತ. ಊರಲ್ಲಿ ಹಿರಿಯರು ಫೋಟೋ ಜಾತಕ ನೋಡಿ ನಿಶ್ಚಯಿಸಿದರು. ಅಲ್ಲಿ ಅವರೂ ಭೇಟಿಯಾಗಿ ಮದುವೆ ನಿಶ್ಚಯವಾಯಿತು. ಅಮ್ಮ ಎಲ್ಲರಿಗಿಂತ ದೊಡ್ಡ ಅಕ್ಕ. ಪುಟ್ಟ ತಂಗಿಯ ವರನ ಫೋಟೋ ನೋಡಿದಳು. ಊರು ಕುಟುಂಬ ಎಲ್ಲ ತಿಳಿದುಬಂತು.

 ಒಂದು ದಿನ ಇದ್ದಕ್ಕಿದ್ದಂತೆ ಮುಖಕ್ಕೆ ಟವೆಲ್ ಕಟ್ಟಿಕೊಂಡು ಅದೇನೋ ಹುಡುಕಲು ಶುರು ಮಾಡಿದಳು! ಹಳ್ಳಿಯ ಧೂಳಿಗೆ ಅವಳಿಗೆ ಉಸಿರು ಕಟ್ಟುತ್ತಿತ್ತು. ಅದಕ್ಕೆ ಈ ಉಪಾಯ. ಅವಳ ಸಂಗ್ರಹದ ಕಂತೆಯಿಂದ ಒಂದೊಂದಾಗಿ ಹಾಳೆಗಳು ಹೊರಬಂದವು. ಓದು ತಪ್ಪಿಸಲು ಅವಕಾಶಕ್ಕೆ ಕಾಯುತ್ತಿದ್ದ ನನಗೆ ಬೇರೆ ಹೇಳಿಕೆ ಬೇಕೇ? ಅವಳಿಗೆ ಸಹಾಯ ಮಾಡಲು ಹೊರಟೆ.

'ಏನು ಹುಡುಕುತ್ತಿ ?' ಎಂದರೆ ಉತ್ತರವಿಲ್ಲ. ಅವಳಿಗೇ ಗೊತ್ತಿತ್ತೋ ಇಲ್ಲವೋ! ನಾನೂ ಕುತೂಹಲದಿಂದ ಆ ಓಬಿರಾಯನ ಕಾಗದಗಳನ್ನು ತಿರುವಿ ಹಾಕಲು ಶುರು ಮಾಡಿದೆ. ಕೆಲವು ಎಂದೋ ನಡೆದ ಮುಖ್ಯ ಘಟನೆಗಳ ಸುದ್ದಿ, ಕೆಲವು ಪ್ರಕಟಗೊಂಡ ಒಳ್ಳೆಯ ಕತೆಗಳು, ಮತ್ತೆ ಕೆಲವು ಪರಿಚಿತರು ಯಾವುದೊ ಸಭೆ ಸಮಾರಂಭದಲ್ಲಿ ಕುಳಿತಿದ್ದ ಫೋಟೋ , ಇನ್ನು ಕೆಲವು 'ನಮ್ಮವರಿರಬಹುದು' ಎಂಬವರ ಫೋಟೋ /ಲೇಖನ - ಹೀಗೆ ಇನ್ನೆಷ್ಟೋ! ಎಲ್ಲ ಚೆಲ್ಲಾಪಿಲ್ಲಿ ಜಾಲಾಡಿ , ನನಗೆ ಈ ಹುಡುಕುವ ಕೆಲಸಕ್ಕಿಂತ ಓದುವುದೇ ಸುಲಭ ಅನ್ನಿಸಿ ಅಲ್ಲಿಂದ ಕಾಲ್ಕಿತ್ತೆ!

ಎಷ್ಟೋ ಹೊತ್ತು ಅಷ್ಟೆಲ್ಲ ತೊಂದರೆ ಕೊಟ್ಟ ನನಗೆ ಬೈಯಲೂ ಮರೆತು ಹುಡುಕಿ ಹುಡುಕಿ  ಒಂದು 4 x 2  ಅಂಗುಲದ ಚೀಟಿ ಹೊರತೆಗೆದಳು "ಇದಾ! ಸಿಕ್ಕಿತ್ತು!!" ಎನ್ನುತ್ತಾ. ಒಬ್ಬ ಕೋಟ್ ಟೈ ಹಾಕಿದ ಸುಂದರ ಯುವಕನ ಚಿತ್ರ . ಸಾಧನೆ : ಭಾರತದ ಖ್ಯಾತ ವಿದ್ಯಾಸಂಸ್ಥೆಯಲ್ಲಿ ಪಿ ಎಚ್ ಡಿ ಮುಗಿಸಿದ್ದು. ಆಗಿನ ಕಾಲದಲ್ಲಿ ಅಂಥಾ ಸುದ್ದಿಗಳು ಬರುತ್ತಿದ್ದುದು ವಿರಳ. ಈತನ ಮನೆ , ತಂದೆ ತಾಯಿ ವಿವರ ನೋಡಿ  'ಇವ ನಮ್ಮವನೋ ಹೇಳಿ!' ಅಂದುಕೊಂಡು ಅಮ್ಮ ಸಂಗ್ರಹಕ್ಕೆ ಸೇರಿಸಿದ್ದಳು! :-)

ಅವಳ ಕುಶಿ ಹಂಚಿಕೊಳ್ಳುವ ಮನಸ್ಸಾದರೂ ಇನ್ನೂ ಆತ ಯಾರೆಂದು ಹೊಳೆಯಲೇ ಇಲ್ಲ. ಕೊನೆಗೆ ಚಿಕ್ಕಮ್ಮನ 'ವರ'ನ ಫೋಟೋವನ್ನೂ ಈ ಚೀಟಿಯನ್ನೂ ಹತ್ತಿರ ಇಟ್ಟು ತೋರಿಸಿದಳು "ಅಯ್ಯೋ! ಪೆದ್ದೆ.. " ಎಂಬಂತೆ ..

ಹೌದು -  "ಹೊಸ ಚಿಕ್ಕಯ್ಯ"ನನ್ನು ಮೊದಲೇ ನೋಡಿ ತನ್ನ database ಗೆ ಎಂದೋ ಸೇರಿಸಿಕೊಂಡಿದ್ದಳು!

Wednesday 21 March 2012

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ?

ಮಾತಿನಲ್ಲಿ ಗಾದೆ ಮಾತು ಬಳಸುವುದರಲ್ಲಿ ನನ್ನಮ್ಮ ಜಾಣೆ. ಸಂದರ್ಭಕ್ಕೆ ಸರಿಯಾಗಿ ಗಾದೆಗಳನ್ನು ಮಾತಿನ ನಡುವೆ ಅನಾಯಾಸವಾಗಿ ಹೆಣೆಯುತ್ತಿದ್ದಳು.

ಮಕ್ಕಳಲ್ಲಿ ಹಠದ ಸ್ವಭಾವವನ್ನು ಅವಳು ಸಹಿಸುತ್ತಿರಲಿಲ್ಲ. ನಮಗೆ ಎಲ್ಲೆಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸರಿಯಾದ ತಿಳುವಳಿಕೆ ನೀಡುತ್ತಿದ್ದಳು. ಕುರ್ಚಿ, ಸೋಫಾದಲ್ಲಿ ಕುಳಿತಿದ್ದಾಗ ಹಿರಿಯರು ಬಂದರೆ ಅವರಿಗೆ ಜಾಗ ಬಿಡಬೇಕು. ಕಾಲು ಅಲ್ಲಾಡಿಸದೆ ಕೂರಬೇಕು. ಹೊಸ್ತಿಲಿನ ಮೇಲೆ ಕೂರಬಾರದು. ಏನೇ ತಿನ್ನಬೇಕೆನಿಸಿದರೂ ಹಂಚಿ ತಿನ್ನಬೇಕು. ಊಟ ತಿಂಡಿಗೆ ಕರೆದ ಕೂಡಲೇ ಬರಬೇಕು. ಮನೆಯ ಕೆಲಸಗಳಲ್ಲಿ ಸಹಕರಿಸಬೇಕು. ಎದುರಾಡಬಾರದು. ಹೀಗೆ ಹತ್ತು ಹಲವು.

ಸ್ವಭಾವತಃ ನಾನು 'ಎಂತಕೆ'? ಎಂಬ ಪ್ರಶ್ನೆಯವಳು. ಎಲ್ಲದಕ್ಕೂ ಕಾರಣ ಬೇಕು. ಕೆಲವೊಮ್ಮೆ ಸಮಯ ಸಂದರ್ಭ ಅರಿಯದೆ ಅವಳ ಮಾತನ್ನು ಮೀರಿದ್ದುಂಟು. ಮೊಂಡು ಹಟವೂ ಇತ್ತು. ಆಗ ಅವಳಿಗೆ ಸಿಟ್ಟು ಬಂದು ನನಗೆರಡು ಏಟೂ ಬೀಳುತ್ತಿತ್ತು.
ಮಜಾ ಎಂದರೆ ಹೊಡೆಯುತ್ತಾ ಅವಳ ಬಾಯಲ್ಲಿ ಬರುವುದು ಗಾದೆ ಮಾತು!

 "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ?!" 


 ಆ ಬಿಸಿ ಬಿಸಿ ಬೆನ್ನಲ್ಲೂ, ನೀರಾಡುವ ಕಣ್ಣಲ್ಲೂ ಈ ನುಡಿಗಳನ್ನು ಕೇಳಿ ಕುಶಿ ಪಡುತ್ತಿದ್ದೆ!

 ಈ  ಎಲ್ಲ ತರಬೇತು ಹೊಸ ಪರಿಸರದಲ್ಲಿ (ಅದೂ ಅವಳ ಅನುಪಸ್ಥಿತಿಯಲ್ಲಿ) ಹೊಂದಿಕೊಳ್ಳಲು ನನಗೆ ತುಂಬಾ ಸಹಕರಿಸಿದೆ. 

Sunday 18 March 2012

ಆರ್ದ್ರ ಹೃದಯಿ

ನಮ್ಮದು ಹಳ್ಳಿ ಮನೆ. ಆಗ ಫ್ರಿಜ್ ಇರಲಿಲ್ಲ. ನಿನ್ನೆಯ ಅಡುಗೆ ಕುದಿಸಿಟ್ಟದ್ದು ಮರುದಿನಕ್ಕೆ ಹಳಸದಿದ್ದರೆ ಬಳಸುತ್ತಿದ್ದೆವು. ಮತ್ತೂ ಉಳಿದದ್ದನ್ನು ದನಕ್ಕೆ  ಕೊಡುವ ಅಕ್ಕಚ್ಚಿಗೆ ಹಾಕುತ್ತಿದ್ದೆವು.

ಮನೆಯ ಹಾಗೂ ತೋಟದ ಕೆಲಸಕ್ಕೆ ಹತ್ತಕ್ಕೂ ಹೆಚ್ಚು ಕೆಲಸದಾಳುಗಳು ಇದ್ದರು. ಅದಲ್ಲಿ ಮಹಿಳೆಯರೂ ಇದ್ದರು. ಮನೆ ಗುಡಿಸಿ, ವರೆಸಿ, ಪಾತ್ರೆ ತೊಳೆದು, ಬಟ್ಟೆ ತೊಳೆದು, ದನಗಳಿಗೆ ಹುಲ್ಲು ತಂದು ಉಳಿದ ಸಮಯದಲ್ಲಿ ಕೃಷಿ ಕೆಲಸದಲ್ಲಿ ತೊಡಗುತ್ತಿದ್ದರು. 
ಅವರಲ್ಲಿ ಕೆಲವರು ಬಸುರಿಯರು, ಇನ್ನು ಕೆಲವರು ಪುಟ್ಟು ಮಕ್ಕಳ ಅಮ್ಮಂದಿರೂ ಇರುತ್ತಿದ್ದರು. 

ಹಾಗಿರುವ ಸಮಯದಲ್ಲಿ ನಮ್ಮಲ್ಲಿ ನಿನ್ನೆಯ ಅಡುಗೆ ಹೆಚ್ಚು ಉಳಿಯುತ್ತಿರಲಿಲ್ಲ. ಅಮ್ಮ ಹೆಚ್ಚಿನ ದಿನಗಳಲ್ಲಿ ಅವರಿಗೆ ಅಡುಗೆ ಕೊಡುತ್ತಿದ್ದರು. ಉಳಿದದ್ದೇ ಆದರೂ ತರಕಾರಿ ಬೇಳೆ ಹಾಕಿದ ಹುಳಿ ಅವರ ಈಗಿನ ಆರೋಗ್ಯಕ್ಕೆ ಅವಶ್ಯಕ ಎಂಬುದು ಅಮ್ಮನ ಧೋರಣೆ. ತೆಗೆದುಕೊಂಡ ಪಾತ್ರೆ ಮರುದಿನ ಕಡ್ಡಾಯವಾಗಿ ತರಬೇಕು ಎಂಬ ನಿಲುವು ಆಕೆ ಸಡಿಲಿಸುತ್ತಿರಲಿಲ್ಲ!  ಯಾಕೆಂದರೆ  ಆ  ದಿನವೂ ಮಜ್ಜಿಗೆಯೋ ಸಾರೋ ಏನೋ ಕೊಡುವ ಯೋಚನೆ ಆಕೆಗಿರುತ್ತಿತ್ತು. 

ನನ್ನ ಪ್ರೀತಿಯ ಬೆಂಡೆಕಾಯಿ ಸಾರು ಮಾಡಿದರೆ ಎರಡೂ ದಿನವೂ ಚಪ್ಪರಿಸಿ ಹೊಡೆಯುತ್ತಿದ್ದೆ. ಒಮ್ಮೆ, ತುಂಬಿದ ಪಾತ್ರೆಯಲ್ಲಿದ್ದ ಉರುಟುರುಟು ಹೂವಿನ ಚಿತ್ತಾರದ ಬೆಂಡೆಕಾಯಿ ಹೋಳುಗಳು ಮರುದಿನ ಇಲ್ಲವಾದ ಸಂಕಟದಲ್ಲಿ 'ಯಾಕೆ ಎಲ್ಲವನ್ನೂ ಕೊಡುತ್ತೀ?!' ಎಂದಾಗ ಪುಟ್ಟ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದು ಮರೆಯಲಾರೆ. 

ಸಿಹಿ ಸಿಹಿ ಅಮ್ಮ !


ಮೊನ್ನೆ ಊರಿಗೆ ಹೋಗಿದ್ದಾಗ ನನ್ನ ಸೋದರತ್ತೆ ಮನೆಗೆ ಹೋಗಿದ್ದೆ. ಬಾಲ್ಯದ ನೆನಪುಗಳನ್ನೆಲ್ಲ ಮೆಲುಕು  ಹಾಕುತ್ತಾ ಕೂತಿದ್ದೆವು.

ಅತ್ತೆಯ ಮಕ್ಕಳಿಗೆ ನನ್ನ ಅಪ್ಪ 'ಪುಟ್ಟು ಮಾವ ', ಅಮ್ಮ 'ಪುಟ್ಟತ್ತೆ'. ರಜಾ ದಿನಗಳಲ್ಲಿ ಪ್ರೀತಿಯಿಂದ ಭೇಟಿ ಕೊಡುತ್ತಿದ್ದರು .
ಮನೆಯ ಅಂಗಳದ ಮೂಲೆಯಲ್ಲಿದ್ದ 'ತೋತಾಪುರಿ' ಮಾವಿನ ಮರ ಎಲ್ಲರಿಗೆ ಅಚ್ಚು ಮೆಚ್ಚು. ಬೇಸಗೆ ರಜದಲ್ಲಿ ಉಪ್ಪು ಮೆಣಸಿನ ಹುಡಿ ನೆಂಚಿ ತಿನ್ನುವ ಸೊಗಸೇ ಬೇರೆ!

ಆಗ ತಮ್ಮಣ್ಣ ಭಾವನಿಗೆ ನೆನಪಾದದ್ದು 'ಪುಟ್ಟತ್ತೆ ಅನ್ನಕ್ಕೆ ರವೆ ಹಾಕಿ ಉಂಬ ' ವಿಷಯ! :-)

ಕನ್ನಡದಲ್ಲಿ 'ರವೆ'  ಅಂದರೆ ಉಪ್ಪಿಟ್ಟು ಮಾಡುವ ಧಾನ್ಯದ ಪುಡಿ. ಆದರೆ ನಮ್ಮ ಭಾಷೆಯಲ್ಲಿ ಅದಕ್ಕೆ ಬೇರೆಯೇ ಅರ್ಥ. ದ್ರವೀಕರಿಸಿದ ಬೆಲ್ಲವೇ ನಮ್ಮ 'ರವೆ'. ದೋಸೆ , ಇಡ್ಲಿ ಗಳ ಜೊತೆಗೆ ಜೇನುತುಪ್ಪದ ತರಹ ಸೇರಿಸಿಕೊಂಡು ಸವಿಯುವ ಪದಾರ್ಥ.

ಅಮ್ಮ ಕೃಶಕಾಯದಾಕೆ. ನನ್ನ ಅಜ್ಜನ ತರಹ ತೀರಾ ಚುರುಕು - ಚಟುವಟಿಕೆಯವಳು. ವೇಗದ ನಡುಗೆ , ಗಡಿಬಿಡಿ ಸ್ವಭಾವ. ಕೈಯಲ್ಲಿ ನೂರಾರು ಕೆಲಸಗಳು. ಮನದೊಳಗೆ ಅದೆಷ್ಟೋ!

ಈ ರೀತಿಯವರಿಗೆ ಆಹಾರ ದೇಹದಲ್ಲಿ ಕರಗುವುದು ಅತಿಶೀಘ್ರ. ಹಾಗೆ ಹಸಿವೂ ಬಹಳ. ಹಸಿವಾದರೆ ಕೋಪವೂ ಸಹಜ.
ಅಮ್ಮನಿಗೆ ಶಕ್ತಿ ಸಿಗುತ್ತಿದ್ದುದು ಸಿಹಿ ಪದಾರ್ಥ ತಿನ್ನುವುದರಿಂದ. ನಮ್ಮ ಅಡುಗೆಗೆ ಸಿಹಿ ಸ್ವಲ್ಪ ಬಳಸುವ ಪರಿಪಾಠವಿದ್ದರೂ ಅವಳಿಗೆ ಅದು ಸಾಲುತ್ತಿರಲಿಲ್ಲ. ಮಧ್ಯಾಹ್ನದ ಉರಿ ಬಿಸಿಲಿಗೆ ತೋಟಕ್ಕೆ ಹೋಗಿ ಬಂದು, ಕುಚ್ಚಿಲಕ್ಕಿ ಅನ್ನದ ಜೊತೆಗೆ ಈ ರವೆಯನ್ನು ಯಥೇಷ್ಟ ಸೇರಿಸಿ ತಿಂದರೆ ಅವಳಿಗೆ ತಂಪೆನಿಸುತ್ತಿತ್ತು !

ಅವಳ ಈ ವಿಲಕ್ಷಣ ರುಚಿ ಬಹಳ ಮಂದಿಗೆ ಚೋದ್ಯದ ವಿಚಾರ! ಅವಳೂ ತನ್ನ ಬಗ್ಗೆ ತಾನೇ ಹೇಳಿ ನಗುತ್ತಿದ್ದುದೂ ಉಂಟು. ಎಲ್ಲಾದರೂ ಅತಿ ಹತ್ತಿರದವರ ಮನೆಗೆ ಹೋದರೆ ಅರ್ಧ ಸಂಕೋಚದಲ್ಲಿ ಸಕ್ಕರೆ ಕೇಳಿ ಹುಳಿ/ಸಾಂಬಾರಿನ ಜೊತೆಗೆ ಸೇರಿಸಿಕೊಂಡದ್ದು ನನಗೆ ನೆನಪಿದೆ (ಏಕೆಂದರೆ ಆಗ ನನಗೂ ಅದು ಇಷ್ಟದ ಪದಾರ್ಥವೇ!)

ಈ ನೆನಪ ಮರುಕಳಿಸಿದ ತಮ್ಮಣ್ಣ ಭಾವ, thanks ! :-)

ಪರಿಚಯ

ಅಮ್ಮನಿಲ್ಲದ ಬದುಕು ಶೂನ್ಯ. ಆಕೆಯ ಅಗಲುವಿಕೆಯ ನೋವು ವರ್ಷಗಳೇ ಕಳೆದರೂ ಇನ್ನೂ ಹಸಿ ಹಸಿ. ಅವಳನ್ನು ಮನಸಾರೆ ಮತ್ತೆ ನೆನಪಿಸಿಕೊಳ್ಳುವ ಈ ಪ್ರಯತ್ನ ಒಂದು ರೀತಿಯ 'ತೆರಪಿ' ಯೂ ಹೌದು .

ಅವಳು ನನಗೊಬ್ಬಳಿಗೇ ಅಮ್ಮ ಅಲ್ಲ. ಅವಳ ಪ್ರೀತಿಪಾತ್ರರೂ ಬಹಳ. ಅಪ್ಪ ಅಮ್ಮನಿಗೆ , ಗಂಡನಿಗೆ 'ಇಂದಿರಾ',ಹಿರಿಯರಿಗೆ  'ಇಂದಿರೆ' , ಕಿರಿಯರಿಗೆ ನೆಚ್ಚಿನ 'ಇಂದಿರಕ್ಕ' ಆಗಿದ್ದಳು. ಚಿಕ್ಕಮ್ಮ, ಹೆರಿಯಮ್ಮ, ಅತ್ತೆ, ಪುಟ್ಟತ್ತೆ , ಅತ್ತಿಗೆ - ಹೀಗೆ ಹಲವು roles ನಿಭಾಯಿಸಿದ್ದಳು.

ಅವಳನ್ನು ಸುಲಭವಾಗಿ ವಿವರಿಸುವುದು ಕಷ್ಟ. ಆದರೂ : ಮಂಗಳೂರು ಎಂಬ ಪೇಟೆಯಲ್ಲಿ ಬಾಲ್ಯ ಕಳೆದು, 60 ರ ದಶಕದಲ್ಲೇ
   ಬಿ ಎಸ್ ಸಿ ಡಿಗ್ರಿ ಪಡೆದಾಕೆ, ಮದುವೆ ಆದ ಕೆಲಕಾಲದ  ನಂತರ ಸಂಸಾರದ ಹಿತದೃಷ್ಟಿಯಿಂದ ಹಳ್ಳಿಗೆ ಬಂದು ನೆಲೆಸಿ, ಹೆಚ್ಚು ಪಾಲು ಒಂಟಿಯಾಗಿಯೇ ತೋಟದ  ಕೃಷಿ ನಡೆಸಿಕೊಂಡು ಬಂದಾಕೆ; ಬ್ಯಾಂಕ್  ಉದ್ಯೋಗದಲ್ಲಿ ಹೊರವೂರಲ್ಲಿದ್ದ  ನನ್ನ ಅಪ್ಪನ 'remote    ನಿರ್ದೇಶನ' ಗಳಲ್ಲಿ ಸೂಕ್ತವೆನಿಸಿದ್ದನ್ನು ಅನುಸರಿಸುತ್ತಿದ್ದವಳು. ೫೦ನೆ  ವರ್ಷದಲ್ಲೂ Readers Digest , Competition Success Review ಇತ್ಯಾದಿ ಪುಸ್ತಕಗಳನ್ನು ತರಿಸಿ ಓದುತ್ತಿದ್ದಾಕೆ.

ಇಲ್ಲಿಯ ಲೇಖನಗಳಿಗೆ ಯಾವುದೇ ನಿರ್ದಿಷ್ಟ order ಇರಲಾರದು. ನನ್ನ ಮನದ ಲಹರಿಯೇ ಚುಕ್ಕಾಣಿ.