Saturday 5 May 2012

ಕಲ್ಮಡ್ಕ ಶಾಲೆ - ೧


ಅಕ್ಕ ಅಣ್ಣ ಮಂಗಳೂರಿನಲ್ಲಿ ಅಜ್ಜಮನೆಯ ಸುಸಂಸ್ಕೃತ ವಾತಾವರಣದಲ್ಲಿದ್ದು, ಉತ್ತಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದರು. ಅವರಿಂದ ಹತ್ತು ವರ್ಷಕ್ಕೂ ಚಿಕ್ಕವಳಾದ ನಾನು ಸರ್ವದಾ "ಸಣ್ಣವಳು" (ಈಗಲೂ!) ಅಮ್ಮನ ಜೊತೆಗಿದ್ದೇ ಕಲಿಯಲಿ, "ಊರಿಗೆ ಮುಂದೆ ಕಿಂಡರ್ ಗಾರ್ಟನ್ ಹೇಳಿ ಎಲ್ಲ ಹೋಗದ್ರೆ ಅಕ್ಕು" ಎಂದು ಕಲ್ಮಡ್ಕದ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲು ನಿರ್ಧರಿಸಿದರು. "ಹಳ್ಳಿ ಶಾಲೆ ಆದ್ರೆ ಎಂತಾತು? ಗೋಳ್ತಜೆ ಮಾವ ಹೆಡ್ ಮಾಷ್ಟ್ರು , ಬೇರೆ ಮಾಷ್ಟ್ರಕ್ಕಳೂ ಹುಷಾರಿದ್ದವು." ಅಂತ ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡೆ.

ಅಪ್ಪ ಅಮ್ಮನ ಈ ನಿರ್ಧಾರಕ್ಕೆ ನಾನೆಷ್ಟು ಋಣಿ!!

 ಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರ ಕೆಲಸ ಬರೀ ಫಾರ್ಮ್ ಭರ್ತಿ ಮಾಡಿ "ನಾಳೆ ಶಾಲೆಗೆ ಕಳಿಸಿ" ಎನ್ನುವಲ್ಲಿಗೆ ಮುಗಿಯುವುದಿಲ್ಲ. ಎಷ್ಟೋ ಜನರಿಗೆ ತಮ್ಮ ಮಕ್ಕಳ ಜನ್ಮ ದಿನಾಂಕ ನೆನಪಿರುವುದಿಲ್ಲ. "ಬಿಸು ಕರಿತ್ ನಾಲ್ ನೆ ದಿನ" (ವಿಷು - ಸೌರ ಯುಗಾದಿ ಕಳೆದು ನಾಕನೇ ದಿನ) ಎಂದೋ "ಆನಿ ಮಲ್ಲ ಬರ್ಸತ ದುಂಬುನಾನಿ ಪುಟ್ಟುನಾಯೆ" (ಅಂದು ದೊಡ್ಡ ಮಳೆ ಬಂದ ಹಿಂದಿನ ದಿನ ಹುಟ್ಟಿದಾತ) ಎಂದೋ ಹೇಳಿದರೆ,  ಅವರು "ಮರ್ಯಾಲನ? " , ಮಳೆಗಾಲವೇ? ಎಂದು ಕೇಳಿಕೊಂಡು , ಇಲ್ಲವಾದರೆ ಆ ದೊಡ್ಡ ಮಳೆಯ ನೆನಪಿನ ಜಾಡು ಹಿಡಿದು ಆಸುಪಾಸಿನ ತಿಂಗಳು, ಮನಸ್ಸಿಗೆ ಬಂದೊಂದು ತಾರೀಕು, ಮಗುವಿನ ಗಾತ್ರ ನೋಡಿ ಅವರೇ ವಯಸ್ಸು ಅಂದಾಜು ಮಾಡಿ ಹುಟ್ಟಿದ ವರ್ಷ ಬರೆದುಕೊಳ್ಳುತ್ತಿದ್ದರು.

 ಮೂಲತಹ ಅನಕ್ಷರಸ್ಥರು ಹಾಗೂ ಕರ್ಮಕರ ವರ್ಗದವರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಯೋಚನೆಯೇ ದೊಡ್ಡ ಹೆಜ್ಜೆ. ಇನ್ನು ಅವರ ವಿವರಗಳ ನಿಖರತೆಗೆ  ಆದ್ಯತೆ ಕೊಟ್ಟರೆ "ಈ ಎಲ್ಲ ರಗಳೆಯೇ ಬೇಡ. ನಮ್ಮ ಜೊತೆಗೆ ಕೆಲಸಕ್ಕೇ ಬರಲಿ ಹುಡುಗ" ಎಂದುಕೊಳ್ಳುವ ಸಾಧ್ಯತೆಯೂ ಬಹಳ. ತಮ್ಮ ಅನುಭವದಿಂದ ಇದೆಲ್ಲ ಅರಿತಿದ್ದ ಗೋಳ್ತಜೆ ಮಾವ ಎಷ್ಟು ಮಕ್ಕಳಿಗೆ ಹೊಸ ಜಾತಕ ಕೊಟ್ಟಿದ್ದರೋ ಏನೋ !

ಅಷ್ಟೇ ಅಲ್ಲ , 'ನಾಮಕರಣ'ವೂ ಅವರ ಜವಾಬ್ದಾರಿಗಳಲ್ಲೊಂದು!

ನಮ್ಮೂರಿನ ಪರಿಶಿಷ್ಟ ಜಾತಿ , ಪಂಗಡಗಳ ಜನರ ಹೆಸರಿನಲ್ಲೊಂದು ಸೊಗಸಿದೆ. ಆದಿತ್ಯವಾರ ಹುಟ್ಟಿದರೆ - ಐತ್ತ /ಐತ್ತೆ , ಸೋಮವಾರ - ಚೋಮ/ಚೋಮು, ಮಂಗಳವಾರ -ಅಂಗಾರ/ಅಂಗಾರೆ; ಗುರುವಾರ ಹುಟ್ಟಿದರೆ ಗುರುವ, ಶುಕ್ರವಾರ ತುಕ್ರ , ಶನಿವಾರ ಜನಿಸಿದವರು ಚನಿಯ, ತನಿಯ /ಚನಿಯಾರು. ಇದಲ್ಲದೆ ಬಾಗಿ, ಕೊರಗ, ಮನ್ಸ, ಭಟ್ಯ, ತಿಮ್ಮಕ್ಕ ಹೀಗೆ  ವೈವಿಧ್ಯಮಯ ಹೆಸರುಗಳು!

ಈ ವರ್ಗದವರಿಗೆ ವಿದ್ಯೆಗೆ, ಉದ್ಯೋಗಕ್ಕೆ ಇರುವ ಮೀಸಲಾತಿಯ ಬಗ್ಗೆ ಅಧ್ಯಾಪಕರಿಗೆ ಅರಿವಿತ್ತು. 'ಕಲ್ತು ಹುಷಾರಾಗಿ' ಮುಂದೊಂದು ದಿನ ಉತ್ತಮ ಹುದ್ದೆಯನ್ನು ನಮ್ಮ ಶಾಲೆ ಮಕ್ಕಳು ಅಲಂಕರಿಸಲಿ ಎಂಬ ಉತ್ತಮ  ಆಶಯ ಅವರದು. ದೊಡ್ಡ ಆಫೀಸರ್ ಆದವರು 'ಮಿಸ್ಟರ್.  ಐತ್ತ' ಎನ್ನುವುದಕ್ಕಿಂತ 'ಮಿಸ್ಟರ್.ಯಶವಂತ' ಯಾ 'ಮಿಸ್ಟರ್.ಸುಂದರ' ಎಂದಿದ್ದರೆ ಚೆನ್ನಲ್ಲವೇ? ಹೀಗೆ 'ಬಾಗಿ' ಭಾಗ್ಯಶ್ರೀ , 'ಚೋಮ' ಸೋಮಶೇಖರ ಆಗುತ್ತಿದ್ದರು. ಮುಖ್ಯೋಪಾಧ್ಯಾಯರು ಅಡ್ಮಿಶನ್ ಸಮಯದಲ್ಲಿ ಅದೆಷ್ಟು re-ನಾಮಕರಣ ಮಾಡಿ ಪುಣ್ಯ ಗಳಿಸಿರಬಹುದು!  

ಮೊದಲೇ ನೋಡಿ ಪರಿಚಯವಿದ್ದ, ಹತ್ತಿರದಿಂದ ನೆಂಟರೂ, ಅಮ್ಮನಿಗೆ ಕೃಷಿ ವಿಚಾರಗಳಲ್ಲಿ ಮಾರ್ಗದರ್ಶಿಯೂ ಆಗಿದ್ದ ಹೆಡ್ ಮಾಷ್ಟ್ರು , ಗೋಳ್ತಜೆ ಸದಾಶಿವಯ್ಯ ಅಮ್ಮನಲ್ಲಿ "ಇದರ ಇನ್ನು ಶಾಲೆಗೆ ಸೇರ್ಸುಲಕ್ಕಪ್ಪ!" ಎಂದರು.ಆಗ ಜೂನ್ ಒಂದರ ಮೊದಲು ೫ ವರ್ಷ ಪೂರ್ತಿಯಾದವರನ್ನು ಮಾತ್ರ ಶಾಲೆಗೆ ಸೇರಿಸಿಕೊಳ್ಳುತ್ತಿದ್ದರು.ಆದರೆ ಜೂನ್ ೧ರ ನಂತರ ಹುಟ್ಟಿದ್ದ ನಾನು ಪೂರ್ತಿ ಇನ್ನೊಂದು  ವರ್ಷ ಕಾಯುವ ಅಗತ್ಯವಿತ್ತು. ಆದರೆ ನನ್ನ ಕಿತಾಪತಿಗಳನ್ನು ನೋಡಿದ್ದ ಅವರು "ಅದಿಕ್ಕೆ ಕಲ್ತುಕೊಂಬ್ಲೆ ಎಡಿಗು, ಏನೂ ತೊಂದ್ರೆ ಇಲ್ಲೆ" ಅಂದೇ ಬಿಟ್ಟರು.ಹಾಗೆ ನನಗೂ ಮೇ ತಿಂಗಳಲ್ಲಿ ಹೊಸ ಹುಟ್ಟುಹಬ್ಬ ಸಿಕ್ಕು ಶಾಲೆಗೆ ಸೇರಿದೆ .

ಆಗೆಲ್ಲ ಯುನಿಫಾರ್ಮ್ ಇರಲಿಲ್ಲ. ನಮ್ಮ ಬಟ್ಟೆಯನ್ನೇ ಹಾಕಿದರಾಯಿತು. ಒಂದು ಚೀಲ. ಅದರೊಳಗೆ ಒಂದು ಪ್ರಿಂಟೆಡ್ ಪುಸ್ತಕ. ಒಂದು ಸ್ಲೇಟ್, ಒಂದೆರಡು ಕಡ್ಡಿ, ಸ್ಲೇಟ್ ವರೆಸಲು ಚಿಂದಿ ಬಟ್ಟೆ, ಮತ್ತು  "ಪೀಟ್ರುಕೋಲು" (ಫೂಟ್ ರೂಲರ್). ಒಂದು ವಾಟ್ರ್ ಕೇನ್ ಹಾಗೂ ಊಟಕ್ಕೆ ಮನೆಗೆ ಹೋಗದಿದ್ದರೆ ಬುತ್ತಿ. ಪಾದರಕ್ಷೆ ಇದ್ದರೂ ಸರಿ ಇಲ್ಲದಿದ್ದರೂ ಅಡ್ಡಿಯಿಲ್ಲ. ಹೇಗಿದ್ದರೂ ತರಗತಿಯೊಳಗೆ ಚಪ್ಪಲಿ ಹಾಕುವವರು ಸರ್ , ಟೀಚರ್ ಮಾತ್ರ.

ನನ್ನಮ್ಮ ಸೈಂಟ್ ಆನ್ಸ್ ಎಂಬ ಕಾನ್ವೆಂಟ್ ಶಾಲೆಯಲ್ಲಿ ಓದಿ ಆ ಕಾಲಕ್ಕೆ ಪ್ರತಿಷ್ಠಿತ ಬೆಸೆಂಟ್ ಕಾಲೇಜಿನಲ್ಲಿ ಓದಿದಾಕೆ. ಸಲೀಸಾಗಿ ಇಂಗ್ಲಿಷ್ ಮಾತಾಡುವ ಬರೆಯುವ ನೈಪುಣ್ಯ ಇದ್ದವಳು. ಈ ಶಾಲೆಗೆ ನನ್ನನ್ನು ಸೇರಿಸಿ ನನ್ನ ಓದು ಹಾಗೂ ನಡವಳಿಕೆಗಳಿಗೆ ಹೊಂದಿಕೊಳ್ಳಲು ಬಹಳ ಶ್ರಮಪಟ್ಟಿರಬೇಕು ಪಾಪ.


ನಾನು ಶಾಲೆಯಲ್ಲಿ ಕಲಿತ ಹೊಸ ಪದಗಳನ್ನು ಹೆಮ್ಮೆಯಿಂದ ಮನೆಯಲ್ಲಿ ಬಂದು ಪ್ರಯೋಗಿಸಿ ಪ್ರದರ್ಶಿಸ ಹೊರಟರೆ ಅಮ್ಮ ಯಾವಾಗಲೂ ಅದನ್ನು ತಿದ್ದಿ ನನ್ನ ಉತ್ಸಾಹಕ್ಕೆ ತಣ್ಣೀರು ಎರೆಯುತ್ತಿದ್ದಳು.
'ಪೀಟ್ರ್ ಕೋಲು' ಅಲ್ಲವಂತೆ, ಅದು 'ರೂಲರ್' ಅಂತೆ. ಹಾಗೆ ನಾನು ಶಾಲೆಗೆ ಹೋಗಿ ಹೇಳಿದರೆ, ಛೆ! ನನ್ನ ಹೊಸ ಗೆಳತಿಯರೆಲ್ಲ ನಕ್ಕಾರು!  ಒಂದನೇ ಕ್ಲಾಸಿನ ನನಗೂ ಅಮ್ಮನಿಗೂ ಇಂಥಾ ವಿಚಾರದಲ್ಲಿ ಎಷ್ಟು ಚರ್ಚೆ ಆಗುತ್ತಿತ್ತು ಅಂದರೆ ಕೊನೆಗೆ ಅಮ್ಮನೇ ಸೋತು  ನಕ್ಕರೆ ಅದಕ್ಕೂ ವಿಪರೀತ ಅವಮಾನವಾಗುತ್ತಿತ್ತು.


ಹೇಮಾವತಿ - ನಮ್ಮೆಲ್ಲರಿಗಿಂತ ಎತ್ತರದವಳು. ಅವಳೆಂದರೆ ನಮಗೆಲ್ಲ ಅಚ್ಚುಮೆಚ್ಚು. ಅವಳ ಬಳಿ ಕುಳಿತುಕೊಳ್ಳಲು, ನೀರು ಕುಡಿಯಲು ಹೋಗುವಾಗ ಕೈ ಕೈ ಹಿಡಿಯಲು, ಬೊಂಬೆ ಆಟ ಆಡುವಾಗ ನಾವೆಲ್ಲ ಅಮ್ಮಂದಿರಾದರೆ ಅಜ್ಜಿಯಾಗಲು ಅವಳೇ ಬೇಕು. ಕಾಪಿ ಬರೆಯಲು ಸ್ಲೇಟ್ ನಲ್ಲಿ ನೀಟಾಗಿ ಗೆರೆ  ಎಳೆಯಬೇಕಲ್ಲ. ನಮ್ಮದೆಲ್ಲ ಓರೆಕೋರೆಯಾಗುತ್ತಿತ್ತು. ಅದಕ್ಕೆ ಹೇಮಾವತಿಗೆ ದಮ್ಮಯ್ಯ ಹಾಕುತ್ತಿದ್ದೆವು. ಅಂಥಾ influence   ಹೊಂದಿದ್ದ ಆಕೆ ಏನು ಮಾಡಿದರೂ ಹೇಳಿದರೂ ಸರಿಯೇ ಅಲ್ಲವೇ?! ಅವಳ famous line  : "ನನಗೆ ಅದೊಂದು  ಮಾತ್ರ ಅಸಾಧ್ಯವೇ ಇಲ್ಲ!" - 'ನನಗೆ ಆ ಕೆಲಸ ಮಾಡಲು ಸಾಧ್ಯವೇ ಇಲ್ಲ' ಎಂದು ಅವಳು ಹೇಳುತ್ತಿದ್ದುದು ಹೀಗೆ.

ಈ ಪ್ರಯೋಗಕ್ಕೆ ಮನೆಯಲ್ಲಿ ಅಮ್ಮನ ಕಟುಟೀಕೆ. ನನಗೆ ದು:ಖ - "ನನ್ನ ಗೆಳತಿಯರೆಂದರೆ ನಿನಗಾಗದು. ಅವರು ಏನು ಹೇಳಿದರೂ ನೀನು ಸರಿಯಿಲ್ಲ ಅನ್ನುತ್ತೀ" ಎಂದು.

ಕೊನೆಗೂ ಅಪ್ಪ ಬಂದಾಗ  ಅವರ ತೀರ್ಮಾನಕ್ಕೆ ನಾನು  ಒಪ್ಪಿ ತಿದ್ದಿಕೊಳ್ಳಲೇ ಬೇಕಾಯ್ತು.