Thursday 5 April 2012

ಸೀರೆ ಸೆರಗು ಹೊದ್ದ ಇಂದಿರಕ್ಕ !


ಅಮ್ಮನ ತವರುಮನೆಯವರೆಲ್ಲ ಸಾಯಿಬಾಬಾ ಭಕ್ತರು. ಸಾಯಿಬಳಗದ ಶಿಸ್ತು ಅವಳ ರಕ್ತದಲ್ಲೇ ಹರಿಯುತ್ತಿತ್ತೇನೋ! ಗಂಡಸರೊಂದಿಗೆ ವ್ಯವಹರಿಸುವಾಗಲೇ ಇರಲಿ (ಈ ಬಗ್ಗೆ ಮುಂದೆ ಬರೆಯುವೆ), ಎಲ್ಲಿ ಹೋದರು ಸಾಧ್ಯವಾದ ಕೆಲಸದಲ್ಲಿ ಸಹಕರಿಸುವುದಿರಲಿ , ಸೀರೆ ಸೆರಗು ಹೊದ್ದುಕೊಂಡಿರುವುದರಲ್ಲೂ ಇದು ಗಣನೆಗೆ ಬರುತ್ತಿತ್ತು .

 ಅಮ್ಮ ಊರಿಗೆ ಬಂದ ಹೊಸತರಲ್ಲಿ ಇದು ಯಾರಿಗೂ ವಿಶೇಷ ಅನ್ನಿಸಿರಲಾರದು. ಮುಂದೆ ನಿಧಾನವಾಗಿ ಸಮಾಜ ಬದಲಾಯಿತು. ಎಲ್ಲರ ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತಿದ್ದ ಕಾಲ. ಬಣ್ಣ ಬಣ್ಣದ ಸೀರೆಗಳನ್ನು ಕೊಂಡುಕೊಳ್ಳುವವರು ಹೆಚ್ಚಾದರು. ಸೆರಗು ಹೊದ್ದು ಓಡಾಡುವುದು 'ಔಟ್ ಆಫ್ ಫ್ಯಾಶನ್' ಅನ್ನಿಸಿಕೊಂಡಿತು!

ಆದರೂ 'ಈ ಇಂದಿರಕ್ಕ ಇನ್ನೂ ಸೆರಗು ಹೊದ್ದುಕೊಂಡೇ ಹೋಪುದು!' ಎಂದಾಯಿತು.

ವ್ಯವಹಾರಕ್ಕೋಸ್ಕರ ಅಮ್ಮನ ಓಡಾಟ ಅಗತ್ಯವೇ ಆಗಿತ್ತು.

 ಒಂಟಿ ಹೆಂಗಸು ಕಾರುಭಾರ ಮಾಡುವುದರಿಂದ - ಸುರಕ್ಷತೆಯ ದೃಷ್ಟಿಯಿಂದ - ಮನೆಗೇ ಬಂದು ಅಡಿಕೆ ಕೊಂಡುಹೋಗುತ್ತಿದ್ದ ಮುಸಲ್ಮಾನ ವರ್ತಕರಿಗೆ ಎಂದೂ ಮಾರಾಟ ಮಾಡುತ್ತಿರಲಿಲ್ಲ. ಆಕೆಯ ಅಪ್ಪಯ್ಯನಿಗೆ ಅಡಿಕೆ ಬಂಡಸಾಲೆ ಇದ್ದುದೂ ಕಾರಣವಾಗಿರಬಹುದು .

ಅಡಿಕೆ ಮಾರಾಟಕ್ಕೆ ಪುತ್ತೂರು ಮಂಗಳೂರಿಗೆ;ಗೊಬ್ಬರ ತರಿಸಲು , ಮನೆ ಖರ್ಚಿಗೆ ದಿನಸಿ , ಅಪರೂಪಕ್ಕೆ ಪೇಟೆ ತರಕಾರಿಗಾಗಿ ಅವಳು ಹೋಗುವುದು ಅನಿವಾರ್ಯ. ಇಲ್ಲದಿದ್ದರೂ ಕಲ್ಮಡ್ಕ ಪೇಟೆಯ ಸೊಸೈಟಿಗಾದರೂ ಹೋಗಬೇಕಿತ್ತು.

ಇಷ್ಟು ಓಡಾಟಕ್ಕೆ ಅವಳಲ್ಲಿ ಹಲವು ಸೀರೆಗಳೂ ಇದ್ದವು. ಅವಳ ಪ್ರೀತಿಯ ತಂಗಿಯರು ವಿದೇಶದಿಂದ ತಂದುಕೊಡುತ್ತಿದ್ದುದು. ಅವು ಎಷ್ಟು ಬಾರಿ ತೊಳೆದು ಉಟ್ಟರೂ ಹರಿಯುತ್ತಿರಲಿಲ್ಲ - ಅಂಥ ಉತ್ತಮ ಗುಣಮಟ್ಟದವು. ಚಂದದ ಚಿತ್ತಾರದವು. ಎಲ್ಲ ಸರಿ - ಆದರೆ ಅದನ್ನು 'ಸ್ಟೈಲಾಗಿ'  ಪಿನ್ ಚುಚ್ಚಿ ಉಡಬಾರದೆ !

 ಈ ಬಗ್ಗೆ ಎಲ್ಲರ ಗಮನ ಹೋಗುತ್ತಿದ್ದುದರ ಸೂಕ್ಷ್ಮ ನನಗೂ ಅರ್ಥವಾಗತೊಡಗಿತು.  ಅವಳ ಆಪ್ತರೂ ಮೆತ್ತಗೆ ಹೇಳತೊಡಗಿದರೆ ಅಮ್ಮ ಶಾಂತವಾಗಿ ಮುಗುಳ್ನಕ್ಕು "ಈ ವರ್ಷ ಕಾಟು ಮಾವಿನ ಮರ ಫಲ ಹೋಯಿದ?" ಅಂತೇನೋ ಮಾತು ಬದಲಿಸುತ್ತಿದ್ದಳು.

 ನಾನು ಹೈಸ್ಕೂಲ್ ಓದುತ್ತಿದ್ದೆ. ಉಡುಪು ತೊಡುಪಿನ ಬಗ್ಗೆ ನನ್ನ ಅರಿವು, ಆಸಕ್ತಿ ಹೆಚ್ಚಾಗಿತ್ತು. ಅಮ್ಮನನ್ನು ಎಲ್ಲಾ ಆಡಿಕೊಳ್ಳುತ್ತಾರೆ ಎಂಬ ನನ್ನ ಚಿಂತೆ ದಿನದಿನಕ್ಕೆ ಹೆಚ್ಚಾಯಿತು. ಒಮ್ಮೆ ಕೇಳಿಯೇ ಬಿಟ್ಟೆ "ನೀನು ಯಾಕೆ ಹಳೆ ಕಾಲದವರ ಹಾಂಗೆ ಹೋಪುದು ?" ಎಂದು. ಅಮ್ಮನಿಗೂ ಹಂಚಿಕೊಳ್ಳುವುದು ಬೇಕಿತ್ತೇನೋ. ಹೇಳಿದಳು - "ಈಗ ಎಲ್ಲವೂ ಮ್ಯಾಚಿಂಗ್ ರವಿಕೆಯೇ ಹಾಕುತ್ತವು. ಎನ್ನತ್ರ ಎಲ್ಲ ಸೀರೆಗೂ ಮ್ಯಾಚಿಂಗ್ ಇಲ್ಲೆ. ಸೆರಗು ಹೊದ್ರೆ ಯಾವ ಬಣ್ಣದ ರವಿಕೆ ಆದ್ರೂ ಆಗ್ತು" ಎಂದು.

 ಕಲ್ಮಡ್ಕದ ಹಳ್ಳಿಯಿಂದ ಪೇಟೆಗೆ ಹೋಗಿ, ಪ್ರತೀ ಸೀರೆಗೂ ಮ್ಯಾಚಿಂಗ್ ಹುಡುಕಿ , ಅಮ್ಮನ ಗೆಳತಿ ಶರಾಳ ಬಳಿ ಹೊಲಿಸಿಕೊಂಡು - ಅದು ಸಿಕ್ಕು - ಅಮ್ಮ 'ಮಾಡರ್ನ್' ಆಗುವ ಸಾಹಸ ಎಣಿಸಿಯೇ ನನಗೆ ಪರಿಸ್ಥಿತಿ ಅರ್ಥವಾಯಿತು. ಅವಳಲ್ಲಿ ಇಷ್ಟೆಲ್ಲಾ ಮಾಡಲು ಸಮಯದ ಅಭಾವವೂ ಇತ್ತು, ಪ್ರತಿಯೊಂದಕ್ಕೂ ಲೆಕ್ಕ ಇಡಬೇಕಾದ ಅನಿವಾರ್ಯತೆಯಿಂದ ಒಂದು ರೀತಿಯ ಆರ್ಥಿಕ ಮುಗ್ಗಟ್ಟೂ ಇತ್ತು.

ಸಮಜಾಯಿಷಿ ಹೇಳುವುದರಿಂದ, ನಕ್ಕು ವಿಷಯ ತೇಲಿಸುವುದು ಹಗುರ ಎಂದು ಅನುಭವದಿಂದ ಕಂಡುಕೊಂಡಿದ್ದಳು..

ಆದರೊಂದು ಮಾತು - ಇಂಟರ್ನೆಟ್ , ಟಿವಿ ಇಲ್ಲದ ಕಾಲದಲ್ಲೂ ಕೇವಲ ಪುಸ್ತಕ-ಪತ್ರಿಕೆಗಳ ಮೂಲಕ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ updated  ಆಗಿದ್ದ ಆಕೆ ಎಲ್ಲರಿಂದ ಹೆಚ್ಚು 'ಮಾಡರ್ನ್' ಆಗಿಯೇ ಇದ್ದಳು. ಗುರುತಿಸುವವರು ಇರಲಿಲ್ಲ ಅಷ್ಟೇ..

 ಜ್ಞಾನತೃಷೆಗೆ  'ಗುರುತಿಸಿಕೊಳ್ಳುವಿಕೆ'ಯ ಅಗತ್ಯವೂ ಇಲ್ಲ ಅನ್ನಿ.




ಕತೆಗಳ ಸುಂದರ ರಾಜ್ಯ !


ಅಮ್ಮ ತುಂಬಾ ಕತೆ ಹೇಳುತ್ತಿದ್ದಳು. ಕೆಲವು ಅವಳ ನೆನಪಿನಿಂದ ತೆಗೆದವು. ಹಲವು ಅವಳ ಬಾಲ್ಯದಲ್ಲಿ ಕತೆ ಹೇಳುವ ಅಜ್ಜಿ  - ಅವಳ 'ಪರಿಯಂಬಿ ಹೆರಿಯಮ್ಮ'  ಹೇಳಿದ್ದನ್ನು ವಿವರಿಸುತ್ತಿದ್ದಳು. 'ಅಮರ ಚಿತ್ರ ಕಥೆ ' ಪುಸ್ತಕಗಳು ನಮಗೆ ಅಚ್ಚುಮೆಚ್ಚು. ಪೇಟೆಗೆ ಹೊರಡುವಾಗ 'ಎಂತ ತರೆಕು?' ಎಂದರೆ ನಾನು ಥಟ್ಟನೆ ಹೇಳುತ್ತಿದ್ದುದು ಈ ಪುಸ್ತಕಗಳನ್ನು.

 ಅಮ್ಮ ಕತೆ ಓದುತ್ತಿದ್ದ ರೀತಿಯೇ ಚಂದ. ಸ್ವರಗಳ ಏರಿಳಿತ, ಒಬ್ಬೊಬ್ಬನ ಮಾತಿಗೂ ಒಂದೊಂದು ಶೈಲಿ - ಪಿಸು ಮಾತಲ್ಲಿ, ಕೆಲವೊಮ್ಮೆ ಜೋರಾಗಿ, ಅಳು-ನಗು-ಕೋಪ ಅಭಿವ್ಯಕ್ತಿಗೊಳಿಸುತ್ತಾ ತುಂಬಾ ರಸವತ್ತಾಗಿ ಹೇಳುತ್ತಿದ್ದಳು.
 ರಷ್ಯನ್ ಪ್ರಕಾಶನದ ಪುಸ್ತಕಗಳ ಪ್ರದರ್ಶನದಿಂದ ತಂದ ಕೆಲವಂತೂ ಇನ್ನೂ ನೆನಪಿದೆ.
ದೊಡ್ಡ ಕರಡಿ, ಹದಾ ಕರಡಿ, ಪುಟ್ಟು ಕರಡಿ  ಕತೆ ಎಷ್ಟು ಕೇಳಿದರೂ ಸಾಲುತ್ತಿರಲಿಲ್ಲ!

ಅಪ್ಪನೂ ತುಂಬಾ ಸೊಗಸಾಗಿ ಕತೆ ಹೇಳುತ್ತಿದ್ದರು. ಕುಮಾರ ವ್ಯಾಸನ ಗದುಗಿನ ಭಾರತ ಅವರಿಗೆ ಅತಿ ಪ್ರಿಯ! ರಜೆಯಲ್ಲಿ ಊರಿಗೆ ಬಂದಾಗ ಸಾಯಂಕಾಲದ ಕಾಫಿ ಕುಡಿದ ನಂತರ ಕೆಲಸದವರೆಲ್ಲ ಮನೆಗೆ ತೆರಳಿದ ಮೇಲೆ - ಕರೆಂಟ್ ಇದ್ದರೆ - ಅಮ್ಮ ದೊಡ್ಡ ಕಪಾಟಿನಲ್ಲಿ ಜೋಪಾನವಾಗಿಟ್ಟ ಪುಸ್ತಕ ಹೊರತೆಗೆದು ಅಪ್ಪನಿಗೆ ಕೊಡುವಳು. ನನ್ನದು ಯಾವತ್ತೂ ಒಂದೇ ಡಿಮ್ಯಾಂಡು - "ಭೀಮ ಬಕಾಸುರನ ಕೊಂದ ಕತೆ ಹೇಳಿ!" ಎಂದು. ಅಪ್ಪ ಕುಮಾರ ವ್ಯಾಸನ ಪದ್ಯಗಳನ್ನು ರಾಗವಾಗಿ ಓದಿ, ಚೆನ್ನಾಗಿ ವಿವರಿಸುತ್ತಿದ್ದರು! ಕಾವಿಯ ಕೆಂಪು ತಂಪು ನೆಲದ ಮೇಲೆ ಉದ್ದಕ್ಕೆ ಕವುಚಿ ಮೈಚಾಚಿ ಮಲಗಿ ಓದುತ್ತಿದ್ದ ಅಪ್ಪನ ಕಾಲಮೇಲೆ ಕೂತು ಭೀಮನ ಸಾಹಸದ ಚಿತ್ರಣವನ್ನು ಎಣಿಸುತ್ತಾ ಎಲ್ಲವನ್ನೂ ಮರೆಯುತ್ತಿದ್ದೆ. ಬಂಡಿಯಲ್ಲಿ  ತುಂಬಿದ್ದ ಬಗೆಬಗೆ ತಿನಿಸುಗಳು, ಭೀಮ ಅದನ್ನು ಸವಿಯುವ ರೀತಿ, ಬಕಾಸುರ ಮರ ಮುರಿದು ಹೊಡೆಯುವಾಗ ತೇಗಿದ ತೃಪ್ತ ಭೀಮ..
 ಅಮ್ಮ ದೇವರಿಗೆ ದೀಪ ಹಚ್ಚಿ, ಕತೆಯ ಮಧ್ಯೆ ಬಂದು ಮಹಾಭಾರತದ ಬಗ್ಗೆ ಏನೋ ಪ್ರಶ್ನೆ ಕೇಳಿ ಅಪ್ಪನ ಉತ್ತರ ಪಡೆದು ಮತ್ತೆ ಊಟದ ತಯಾರಿಗೆ ಹೋಗುವಳು..

ಅಪ್ಪನಿಗೆ ಹೋಲಿಸಿದರೆ ಅಮ್ಮನದು  ಹೊಸ ರೀತಿಯ ಕತೆಗಳು. ಪಂಚತಂತ್ರದ ಕತೆಗಳು, ರಜಪೂತ ರಾಜ ರಾಣಿಯರದು, ಬಟಾಣಿ ಬಳ್ಳಿ ಏರಿದ ಸಾಹಸಿಯದು,  ಸಿಂಡರೆಲಾ ತರಹದ ರಾಜಕುಮಾರಿಯರದು..

ಎಷ್ಟೋ ವರ್ಷ ಕಳೆದು ನಾನು ಹಾಸ್ಟೆಲ್ ಸೇರಿದ ಮೇಲೆ ಅಪರೂಪಕ್ಕೆ ಮನೆಗೆ ಬಂದಾಗ ಅಮ್ಮನ ಜುಟ್ಟು ಸಡಿಲಿಸಿ ಕೆಳಗಿಳಿದ  ಸಪುರ ಉದ್ದದ ಜಡೆ ತಿರುಗಿಸುತ್ತಾ, ಕುಶಾಲಿಗೆ 'ಕತೆ ಹೇಳಮ್ಮ!' ಅನ್ನುತ್ತಿದ್ದೆ. ಅವಳ ಶೈಲಿಯಲ್ಲಿ ಕೇಳಲು ಆಸೆ ನನಗೆ. ನಾಚಿ, ನಕ್ಕು ವಿಷಯ ಬದಲಿಸುತ್ತಿದ್ದಳು.

ಅವಳು 'ಅಜ್ಜಿ'ಯಾಗಿ ಮೊಮ್ಮಕ್ಕಳಿಗೆ ಕತೆ ಹೇಳುವುದನ್ನು ಕೇಳುವ ಭಾಗ್ಯ ನಮ್ಮದಾಗಲಿಲ್ಲ.. ಅವಳ ಸುದ್ದಿ ಕೇಳಿದ್ದ ನನ್ನ  ಪುಟಾಣಿ ಮಗಳು ತಾನು ಅಜ್ಜಿಯನ್ನು ನೋಡಲೇ ಇಲ್ಲ ಅಂತ ಅಳುವಾಗ ಮನಕೆ ಮಂಕು ಹಿಡಿದದ್ದು ಸಹಜ.

ನನ್ನವರ ಸೋದರತ್ತೆ  ಬಂದವರು, ಪ್ರೀತಿಯಿಂದ ತಮ್ಮ ಬಾಲ್ಯದ ನೆನಪಿನ ಹಲವು ಕತೆಗಳನ್ನು ಹೇಳಿ ತಂಪೆರೆದದ್ದು   ಮರೆಯುವಂತಿಲ್ಲ !