Saturday 24 March 2012

ಅಮ್ಮನ ಸಂಗ್ರಹ


 ನನ್ನಮ್ಮ ನಮಗೆಲ್ಲ ಪ್ರೀತಿಯ ಪ್ರಸಿದ್ಧ 'ಇಂದಿರಮ್ಮ';  ಸಾಮಾನ್ಯಳಲ್ಲ!
 (ಅವಳೀಗ ಇಲ್ಲಿ ಕುಳಿತಿದ್ದರೆ ನನ್ನ ಮಾತಿಗೆ ಮೆತ್ತಗೆ ಸದ್ದಿಲ್ಲದೇ, ತನ್ನ ಹಸುರು ಕಣ್ಣಲ್ಲೇ ನಗುತ್ತಿದ್ದಳು. )

ಅವಳ ಒಂದೊಂದು ಆಸಕ್ತಿಯೂ ನನಗೆ ಅದ್ಭುತವಾಗಿಯೇ ಕಾಣುತ್ತಿತ್ತು. ಎಲ್ಲವನ್ನೂ ಸಂಗ್ರಹಿಸುವುದು ಅವಳ ಅಭ್ಯಾಸ. ಹೂವಿನ ಗಿಡವಿರಬಹುದು, ಕಾಡುವೃಕ್ಷಗಳ ಪುಟಾಣಿ ಗಿಡಗಳಿರಬಹುದು, ಬಣ್ಣ ಬಣ್ಣದ ಹಕ್ಕಿ ಗರಿಗಳಿರಬಹುದು, ಉದಯವಾಣಿ-ತರಂಗ-ಸುಧಾದಲ್ಲಿ ಬಂದ ಲೇಖನಗಳಿರಬಹುದು, ಅಂಚೆ ಚೀಟಿಗಳಿರಬಹುದು,  'ನೆನಪಿ'ಗೆಂದು ಜೋಪಾನವಾಗಿಟ್ಟ ನಮ್ಮ ಬಾಲ್ಯದ ಉಡುಪುಗಳಿರಬಹುದು, ಇವಿಷ್ಟೇ ಅಲ್ಲ! ಕನಸು ಕಾಣುವ ವಯಸಿನ ನಾನು ಲಹರಿಯಲ್ಲಿ ಸದ್ದಿಲ್ಲದೆ ಬರೆದೆಸೆದ ಚಿತ್ರ , ಕವನಗಳೇ ಇರಬಹುದು - ಅವಳ ಸಂಗ್ರಹಾಲಯದಲ್ಲಿ..

ಅವಳ ಈ ವಿಶಿಷ್ಟ ವಿದ್ಯೆಯ ಸುದ್ದಿ ಎಲ್ಲವನ್ನೂ ಒಂದೇ ಸಲ ಹೇಳಿ ಹಗುರಾಗುವುದು ಅಸಾಧ್ಯ!  ಇವತ್ತಿಗೆ ಇದು :

ನನ್ನ ಚಿಕ್ಕಮ್ಮನಿಗೆ ಮದುವೆ ಗೊತ್ತಾಗಿತ್ತು. ವಿದೇಶದಲ್ಲಿದ್ದ ಆಕೆ. ವಿದೇಶದಲ್ಲಿದ್ದ ಆತ. ಊರಲ್ಲಿ ಹಿರಿಯರು ಫೋಟೋ ಜಾತಕ ನೋಡಿ ನಿಶ್ಚಯಿಸಿದರು. ಅಲ್ಲಿ ಅವರೂ ಭೇಟಿಯಾಗಿ ಮದುವೆ ನಿಶ್ಚಯವಾಯಿತು. ಅಮ್ಮ ಎಲ್ಲರಿಗಿಂತ ದೊಡ್ಡ ಅಕ್ಕ. ಪುಟ್ಟ ತಂಗಿಯ ವರನ ಫೋಟೋ ನೋಡಿದಳು. ಊರು ಕುಟುಂಬ ಎಲ್ಲ ತಿಳಿದುಬಂತು.

 ಒಂದು ದಿನ ಇದ್ದಕ್ಕಿದ್ದಂತೆ ಮುಖಕ್ಕೆ ಟವೆಲ್ ಕಟ್ಟಿಕೊಂಡು ಅದೇನೋ ಹುಡುಕಲು ಶುರು ಮಾಡಿದಳು! ಹಳ್ಳಿಯ ಧೂಳಿಗೆ ಅವಳಿಗೆ ಉಸಿರು ಕಟ್ಟುತ್ತಿತ್ತು. ಅದಕ್ಕೆ ಈ ಉಪಾಯ. ಅವಳ ಸಂಗ್ರಹದ ಕಂತೆಯಿಂದ ಒಂದೊಂದಾಗಿ ಹಾಳೆಗಳು ಹೊರಬಂದವು. ಓದು ತಪ್ಪಿಸಲು ಅವಕಾಶಕ್ಕೆ ಕಾಯುತ್ತಿದ್ದ ನನಗೆ ಬೇರೆ ಹೇಳಿಕೆ ಬೇಕೇ? ಅವಳಿಗೆ ಸಹಾಯ ಮಾಡಲು ಹೊರಟೆ.

'ಏನು ಹುಡುಕುತ್ತಿ ?' ಎಂದರೆ ಉತ್ತರವಿಲ್ಲ. ಅವಳಿಗೇ ಗೊತ್ತಿತ್ತೋ ಇಲ್ಲವೋ! ನಾನೂ ಕುತೂಹಲದಿಂದ ಆ ಓಬಿರಾಯನ ಕಾಗದಗಳನ್ನು ತಿರುವಿ ಹಾಕಲು ಶುರು ಮಾಡಿದೆ. ಕೆಲವು ಎಂದೋ ನಡೆದ ಮುಖ್ಯ ಘಟನೆಗಳ ಸುದ್ದಿ, ಕೆಲವು ಪ್ರಕಟಗೊಂಡ ಒಳ್ಳೆಯ ಕತೆಗಳು, ಮತ್ತೆ ಕೆಲವು ಪರಿಚಿತರು ಯಾವುದೊ ಸಭೆ ಸಮಾರಂಭದಲ್ಲಿ ಕುಳಿತಿದ್ದ ಫೋಟೋ , ಇನ್ನು ಕೆಲವು 'ನಮ್ಮವರಿರಬಹುದು' ಎಂಬವರ ಫೋಟೋ /ಲೇಖನ - ಹೀಗೆ ಇನ್ನೆಷ್ಟೋ! ಎಲ್ಲ ಚೆಲ್ಲಾಪಿಲ್ಲಿ ಜಾಲಾಡಿ , ನನಗೆ ಈ ಹುಡುಕುವ ಕೆಲಸಕ್ಕಿಂತ ಓದುವುದೇ ಸುಲಭ ಅನ್ನಿಸಿ ಅಲ್ಲಿಂದ ಕಾಲ್ಕಿತ್ತೆ!

ಎಷ್ಟೋ ಹೊತ್ತು ಅಷ್ಟೆಲ್ಲ ತೊಂದರೆ ಕೊಟ್ಟ ನನಗೆ ಬೈಯಲೂ ಮರೆತು ಹುಡುಕಿ ಹುಡುಕಿ  ಒಂದು 4 x 2  ಅಂಗುಲದ ಚೀಟಿ ಹೊರತೆಗೆದಳು "ಇದಾ! ಸಿಕ್ಕಿತ್ತು!!" ಎನ್ನುತ್ತಾ. ಒಬ್ಬ ಕೋಟ್ ಟೈ ಹಾಕಿದ ಸುಂದರ ಯುವಕನ ಚಿತ್ರ . ಸಾಧನೆ : ಭಾರತದ ಖ್ಯಾತ ವಿದ್ಯಾಸಂಸ್ಥೆಯಲ್ಲಿ ಪಿ ಎಚ್ ಡಿ ಮುಗಿಸಿದ್ದು. ಆಗಿನ ಕಾಲದಲ್ಲಿ ಅಂಥಾ ಸುದ್ದಿಗಳು ಬರುತ್ತಿದ್ದುದು ವಿರಳ. ಈತನ ಮನೆ , ತಂದೆ ತಾಯಿ ವಿವರ ನೋಡಿ  'ಇವ ನಮ್ಮವನೋ ಹೇಳಿ!' ಅಂದುಕೊಂಡು ಅಮ್ಮ ಸಂಗ್ರಹಕ್ಕೆ ಸೇರಿಸಿದ್ದಳು! :-)

ಅವಳ ಕುಶಿ ಹಂಚಿಕೊಳ್ಳುವ ಮನಸ್ಸಾದರೂ ಇನ್ನೂ ಆತ ಯಾರೆಂದು ಹೊಳೆಯಲೇ ಇಲ್ಲ. ಕೊನೆಗೆ ಚಿಕ್ಕಮ್ಮನ 'ವರ'ನ ಫೋಟೋವನ್ನೂ ಈ ಚೀಟಿಯನ್ನೂ ಹತ್ತಿರ ಇಟ್ಟು ತೋರಿಸಿದಳು "ಅಯ್ಯೋ! ಪೆದ್ದೆ.. " ಎಂಬಂತೆ ..

ಹೌದು -  "ಹೊಸ ಚಿಕ್ಕಯ್ಯ"ನನ್ನು ಮೊದಲೇ ನೋಡಿ ತನ್ನ database ಗೆ ಎಂದೋ ಸೇರಿಸಿಕೊಂಡಿದ್ದಳು!

No comments:

Post a Comment