Thursday 5 April 2012

ಕತೆಗಳ ಸುಂದರ ರಾಜ್ಯ !


ಅಮ್ಮ ತುಂಬಾ ಕತೆ ಹೇಳುತ್ತಿದ್ದಳು. ಕೆಲವು ಅವಳ ನೆನಪಿನಿಂದ ತೆಗೆದವು. ಹಲವು ಅವಳ ಬಾಲ್ಯದಲ್ಲಿ ಕತೆ ಹೇಳುವ ಅಜ್ಜಿ  - ಅವಳ 'ಪರಿಯಂಬಿ ಹೆರಿಯಮ್ಮ'  ಹೇಳಿದ್ದನ್ನು ವಿವರಿಸುತ್ತಿದ್ದಳು. 'ಅಮರ ಚಿತ್ರ ಕಥೆ ' ಪುಸ್ತಕಗಳು ನಮಗೆ ಅಚ್ಚುಮೆಚ್ಚು. ಪೇಟೆಗೆ ಹೊರಡುವಾಗ 'ಎಂತ ತರೆಕು?' ಎಂದರೆ ನಾನು ಥಟ್ಟನೆ ಹೇಳುತ್ತಿದ್ದುದು ಈ ಪುಸ್ತಕಗಳನ್ನು.

 ಅಮ್ಮ ಕತೆ ಓದುತ್ತಿದ್ದ ರೀತಿಯೇ ಚಂದ. ಸ್ವರಗಳ ಏರಿಳಿತ, ಒಬ್ಬೊಬ್ಬನ ಮಾತಿಗೂ ಒಂದೊಂದು ಶೈಲಿ - ಪಿಸು ಮಾತಲ್ಲಿ, ಕೆಲವೊಮ್ಮೆ ಜೋರಾಗಿ, ಅಳು-ನಗು-ಕೋಪ ಅಭಿವ್ಯಕ್ತಿಗೊಳಿಸುತ್ತಾ ತುಂಬಾ ರಸವತ್ತಾಗಿ ಹೇಳುತ್ತಿದ್ದಳು.
 ರಷ್ಯನ್ ಪ್ರಕಾಶನದ ಪುಸ್ತಕಗಳ ಪ್ರದರ್ಶನದಿಂದ ತಂದ ಕೆಲವಂತೂ ಇನ್ನೂ ನೆನಪಿದೆ.
ದೊಡ್ಡ ಕರಡಿ, ಹದಾ ಕರಡಿ, ಪುಟ್ಟು ಕರಡಿ  ಕತೆ ಎಷ್ಟು ಕೇಳಿದರೂ ಸಾಲುತ್ತಿರಲಿಲ್ಲ!

ಅಪ್ಪನೂ ತುಂಬಾ ಸೊಗಸಾಗಿ ಕತೆ ಹೇಳುತ್ತಿದ್ದರು. ಕುಮಾರ ವ್ಯಾಸನ ಗದುಗಿನ ಭಾರತ ಅವರಿಗೆ ಅತಿ ಪ್ರಿಯ! ರಜೆಯಲ್ಲಿ ಊರಿಗೆ ಬಂದಾಗ ಸಾಯಂಕಾಲದ ಕಾಫಿ ಕುಡಿದ ನಂತರ ಕೆಲಸದವರೆಲ್ಲ ಮನೆಗೆ ತೆರಳಿದ ಮೇಲೆ - ಕರೆಂಟ್ ಇದ್ದರೆ - ಅಮ್ಮ ದೊಡ್ಡ ಕಪಾಟಿನಲ್ಲಿ ಜೋಪಾನವಾಗಿಟ್ಟ ಪುಸ್ತಕ ಹೊರತೆಗೆದು ಅಪ್ಪನಿಗೆ ಕೊಡುವಳು. ನನ್ನದು ಯಾವತ್ತೂ ಒಂದೇ ಡಿಮ್ಯಾಂಡು - "ಭೀಮ ಬಕಾಸುರನ ಕೊಂದ ಕತೆ ಹೇಳಿ!" ಎಂದು. ಅಪ್ಪ ಕುಮಾರ ವ್ಯಾಸನ ಪದ್ಯಗಳನ್ನು ರಾಗವಾಗಿ ಓದಿ, ಚೆನ್ನಾಗಿ ವಿವರಿಸುತ್ತಿದ್ದರು! ಕಾವಿಯ ಕೆಂಪು ತಂಪು ನೆಲದ ಮೇಲೆ ಉದ್ದಕ್ಕೆ ಕವುಚಿ ಮೈಚಾಚಿ ಮಲಗಿ ಓದುತ್ತಿದ್ದ ಅಪ್ಪನ ಕಾಲಮೇಲೆ ಕೂತು ಭೀಮನ ಸಾಹಸದ ಚಿತ್ರಣವನ್ನು ಎಣಿಸುತ್ತಾ ಎಲ್ಲವನ್ನೂ ಮರೆಯುತ್ತಿದ್ದೆ. ಬಂಡಿಯಲ್ಲಿ  ತುಂಬಿದ್ದ ಬಗೆಬಗೆ ತಿನಿಸುಗಳು, ಭೀಮ ಅದನ್ನು ಸವಿಯುವ ರೀತಿ, ಬಕಾಸುರ ಮರ ಮುರಿದು ಹೊಡೆಯುವಾಗ ತೇಗಿದ ತೃಪ್ತ ಭೀಮ..
 ಅಮ್ಮ ದೇವರಿಗೆ ದೀಪ ಹಚ್ಚಿ, ಕತೆಯ ಮಧ್ಯೆ ಬಂದು ಮಹಾಭಾರತದ ಬಗ್ಗೆ ಏನೋ ಪ್ರಶ್ನೆ ಕೇಳಿ ಅಪ್ಪನ ಉತ್ತರ ಪಡೆದು ಮತ್ತೆ ಊಟದ ತಯಾರಿಗೆ ಹೋಗುವಳು..

ಅಪ್ಪನಿಗೆ ಹೋಲಿಸಿದರೆ ಅಮ್ಮನದು  ಹೊಸ ರೀತಿಯ ಕತೆಗಳು. ಪಂಚತಂತ್ರದ ಕತೆಗಳು, ರಜಪೂತ ರಾಜ ರಾಣಿಯರದು, ಬಟಾಣಿ ಬಳ್ಳಿ ಏರಿದ ಸಾಹಸಿಯದು,  ಸಿಂಡರೆಲಾ ತರಹದ ರಾಜಕುಮಾರಿಯರದು..

ಎಷ್ಟೋ ವರ್ಷ ಕಳೆದು ನಾನು ಹಾಸ್ಟೆಲ್ ಸೇರಿದ ಮೇಲೆ ಅಪರೂಪಕ್ಕೆ ಮನೆಗೆ ಬಂದಾಗ ಅಮ್ಮನ ಜುಟ್ಟು ಸಡಿಲಿಸಿ ಕೆಳಗಿಳಿದ  ಸಪುರ ಉದ್ದದ ಜಡೆ ತಿರುಗಿಸುತ್ತಾ, ಕುಶಾಲಿಗೆ 'ಕತೆ ಹೇಳಮ್ಮ!' ಅನ್ನುತ್ತಿದ್ದೆ. ಅವಳ ಶೈಲಿಯಲ್ಲಿ ಕೇಳಲು ಆಸೆ ನನಗೆ. ನಾಚಿ, ನಕ್ಕು ವಿಷಯ ಬದಲಿಸುತ್ತಿದ್ದಳು.

ಅವಳು 'ಅಜ್ಜಿ'ಯಾಗಿ ಮೊಮ್ಮಕ್ಕಳಿಗೆ ಕತೆ ಹೇಳುವುದನ್ನು ಕೇಳುವ ಭಾಗ್ಯ ನಮ್ಮದಾಗಲಿಲ್ಲ.. ಅವಳ ಸುದ್ದಿ ಕೇಳಿದ್ದ ನನ್ನ  ಪುಟಾಣಿ ಮಗಳು ತಾನು ಅಜ್ಜಿಯನ್ನು ನೋಡಲೇ ಇಲ್ಲ ಅಂತ ಅಳುವಾಗ ಮನಕೆ ಮಂಕು ಹಿಡಿದದ್ದು ಸಹಜ.

ನನ್ನವರ ಸೋದರತ್ತೆ  ಬಂದವರು, ಪ್ರೀತಿಯಿಂದ ತಮ್ಮ ಬಾಲ್ಯದ ನೆನಪಿನ ಹಲವು ಕತೆಗಳನ್ನು ಹೇಳಿ ತಂಪೆರೆದದ್ದು   ಮರೆಯುವಂತಿಲ್ಲ !



  

No comments:

Post a Comment