Sunday 25 March 2012

ಆನೆ ಬಂತೊಂದಾನೆ !


ನಿನ್ನೆ ತವರಿನ ನೆನಪಾಗಿ ಅಣ್ಣ ಅತ್ತಿಗೆಯ ಬಳಿ ಮಾತಾಡಿದೆ.
ಅಣ್ಣ ಪಶುವೈದ್ಯಕೀಯದಲ್ಲಿ ತರಬೇತಿ ಪಡೆದು ಕೆನಡಾದ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ಮಾಡುತ್ತಿದ್ದವನು. ಅತ್ತಿಗೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಪದವಿ ಗಳಿಸಿದಾಕೆ. ಇಬ್ಬರೂ ನನ್ನ ಅಪ್ಪನಿಗೆ "ಸೆರೆಬ್ರಲ್ ಆಟ್ರೋಫಿ", ನಿಧಾನವಾಗಿ ಕ್ಷೀಣವಾಗುವರು ಎಂದು ತಿಳಿದ ಕೂಡಲೇ ಊರಿಗೆ ಹಿಂದಿರುಗಿದವರು. ಹಾಸಿಗೆ ಹಿಡಿದ ಅಪ್ಪನನ್ನು
ನೋಡಿಕೊಂಡು, ತೋಟದ ಕೃಷಿಕಾರ್ಯಗಳನ್ನೂ ಕರಗತಗೊಳಿಸಿಕೊಂಡವರು.  ಹಳ್ಳಿಯ ಜೀವನದ ಹೊಸ ಹೊಸ challenges ನ್ನು ತಮ್ಮದೇ ರೀತಿಯಲ್ಲಿ ಎದುರಿಸುತ್ತಾ ಬಂದ ಅವರ  ಬಗ್ಗೆ  ಗೌರವಪೂರ್ಣ ಬೆರಗು, ಆದರ ನನಗೆ.

ನಿನ್ನೆ ಅತ್ತಿಗೆ ಮಾತಾಡುತ್ತಾ "ನಮಗೆ ಇಲ್ಲಿ ಬಗೆಬಗೆಯ adventures !" ಎಂದಳು.

ಬೆಳಗ್ಗೆ  ಮನೆಗೆ ಬರುವ ಗೇಟಿನ ಪಕ್ಕದಲ್ಲಿ ನಡೆದು ಹೋಗಲು ಬಿಟ್ಟ ಸಣ್ಣ ದಾರಿಯ ಗೋಡೆ ಮುರಿದುಬಿದ್ದಿದೆ. ಮಳೆಯಿಲ್ಲ ಗಾಳಿಯಿಲ್ಲ - ಹೇಗಾಯಿತು?! ಪಕ್ಕದ ಮನೆ ಅಕ್ಕ ಫೋನ್ ಮಾಡಿ 'ನಿಂಗಳ ತೋಟಕ್ಕೂ ಆನೆ ಬಂದಿದಾ?' ಎಂದು ಕೇಳಿದಾಗಲೇ ಹೊಳೆದದ್ದು!

ರಾತ್ರಿ ಗೂಡಿನಿಂದ ನಾಯಿ ನಿರಂತರವಾಗಿ ಬೊಗಳಿದಾಗ  ಅಣ್ಣ ಎರಡೆರಡು ಬಾರಿ ಎದ್ದು  ಟಾರ್ಚ್  ಲೈಟ್ ಬಿಟ್ಟು ನೋಡಿದ್ದಾಗಿತ್ತು.  ಏನೂ ಕಾಣದೆ  'ಹೆಗ್ಗಣ ಆಗಿರೆಕ್ಕು ' ಎಂದುಕೊಂಡು ಮಲಗಿದ್ದನಂತೆ.

ಈಗ ರಹಸ್ಯ ಬಯಲಾಯಿತು. ಅತ್ತಿಗೆ ಪತ್ತೆದಾರಿಕೆ ಮಾಡಿ ಕಂಡುಕೊಂಡಳು - ಅದು ತೋಟದ ಬದಿಯ ನೀರು ಹೋಗುವ ಕಾಲುವೆಯನ್ನೇ   (ನಮ್ಮ ಮಾತಿನಲ್ಲಿ 'ತೋಡು') ಹೆದ್ದಾರಿಯನ್ನಾಗಿಸಿಕೊಂಡು ಪಕ್ಕದ ತೋಟಕ್ಕೆ ನುಗ್ಗಿದೆ. ಕಿಲೋಮೀಟರ್   ದೂರದಲ್ಲೇ ಇರುವ ಕಾಡಿನಿಂದ ದಾರಿ ತಪ್ಪಿ ಬಂತೋ, ತಿನ್ನಲೇನಾದರೂ ಸಿಗುತ್ತೋ ಅಂತ ಪರಿಶೀಲನೆ ಮಾಡಲು
ಬಂತೋ ಇನ್ನೂ ತಿಳಿದಿಲ್ಲ. 'ಬಂದಿದ್ದೇನೆ' ಎನ್ನಲು ಸಾಕ್ಷಿಗೋ ಎಂಬಂತೆ ಲದ್ದಿಯಂತೂ ಹಾಕಿ ಹೋಗಿದೆ.
   
ನಮ್ಮ ತೋಟಕ್ಕೆ, ಊರಿಗೆ ಆನೆ, ಕಾಡುಹಂದಿ ಬರುವುದು ಹೊಸದೇನೂ ಅಲ್ಲ. ಅಮ್ಮ ಊರಿಗೆ ಬಂದು ಕೃಷಿ ಶುರು ಮಾಡಿದ ಕಾಲಕ್ಕೆ ಸುತ್ತೆಲ್ಲ ಇನ್ನೂ ದಟ್ಟ ಕಾಡು ಇತ್ತಂತೆ. ಗದ್ದೆಯಲ್ಲಿ ಭತ್ತದ ಒಂದು ಬೆಳೆಯಾದ ಬಳಿಕ ತರಕಾರಿ ಹಾಕುತ್ತಿದ್ದರಂತೆ. ಊರಿಗೆ ನುಗ್ಗಿದ ಕಾಡುಪ್ರಾಣಿಗಳ ಹಿಂಡು ಆ ನಟ್ಟಿಕಾಯಿ ಸಾಲುಗಳಲ್ಲಿ ಓಡಾಡಿ, ತೋಟದ ಬಾಳೆಗಿಡಗಳನ್ನು ಚೆಲ್ಲಾಪಿಲ್ಲಿಮಾಡಿ ಹೋಗುತ್ತಿದ್ದವಂತೆ.

 ನನ್ನ ಕಾಲಕ್ಕೆ ಕಾಡು ಕಡಿಮೆಯಾಗತೊಡಗಿತ್ತು. ಆನೆಗಳೆಲ್ಲ 'employed ' ಆಗಿದ್ದವು. ಮರಕಡಿದು ಸಾಗಿಸುವ ವರ್ತಕರೆ ಆನೆಗಳ ಒಡೆಯರು. ಅವು 'ಮರ ಎಳೆಯುವುದನ್ನು' ನೋಡುವುದೇ ಒಂದು ಮೋಜು ಆಗ.

1980 ರ ಜೂನ್ ತಿಂಗಳು.  ನನ್ನನ್ನು ಶಾಲೆಗೆ ಸೇರಿಸಬೇಕು ಎಂದುಕೊಂಡು ಅಮ್ಮ ಕಲ್ಮಡ್ಕಕ್ಕೆ  ಕರೆದುಕೊಂಡು  ಹೋಗಿದ್ದಳು.  ಸ್ವಚ್ಛಂದ ಜೀವನಕ್ಕೆ ಒಗ್ಗಿಕೊಂಡಿದ್ದ ನನಗೆ ಶಾಲೆ ಬೇಕಾಗಿರಲಿಲ್ಲ. ಊರಿಗೆ ಬಂದ ಅಕ್ಕನೂ ಇದ್ದಾಗ 'ಎಲ್ಲಾ ಗಮ್ಮತ್ತು ಬಿಟ್ಟು ಹೋಯೆಕ್ಕಾ ?!' ಎಂದು ಅಳುಮೊಗದಲ್ಲೇ ಇದ್ದೆ. ಕಲ್ಮಡ್ಕ ಪೇಟೆಯೆಲ್ಲ ಗುಸು ಗುಸು - "ಆನೆ ಬಪ್ಪುದಡ ! ಮರ ಎಳಿಲೆ ! ಹಾಸಡ್ಕದ ಹತ್ರಕ್ಕೆ..  "  ಅದು ಕೇಳಿದ ಮೇಲೆ ಇನ್ನೇನು ಬೇಕು ! ಏನೆಲ್ಲಾ ಪ್ರಯತ್ನ ಮಾಡಿ, ಗುಡುಗು-ಮಿಂಚು-ಮೋಡ-ಮಳೆಗರೆದು  ಅಂತೂ ಇಂತೂ ಅಮ್ಮನಿಗೂ ಮನ ಕರಗಿತು. ಪೇಟೆಯಲ್ಲಿದ್ದ ಅಕ್ಕನಿಗೂ ಹೊಸ ನೋಟ - ಅನುಭವ ಎಂದುಕೊಂಡು ಹೊರಡುವ ಮನಸ್ಸು ಮಾಡಿದಳು ..

ಆದರೆ ಹಾಸಡ್ಕ ಏನು ಹತ್ತಿರವೇ?  ಮೂರು ಮೈಲಿ  ದೂರದ ಅಲ್ಲಿಗೆ ನೇರ ಮಾರ್ಗವಿದ್ದರೂ ಬಸ್ ಸಂಚಾರ ಆಗಲೂ ಇರಲಿಲ್ಲ ಈಗಲೂ ಇಲ್ಲ. ಈಗಿನಂತೆ ಮನೆಮನೆಯಲ್ಲಿ ವಾಹನ ಸೌಕರ್ಯ ಇಲ್ಲದಿದ್ದ ಕಾಲ. ನಡೆದೇ ಹೋಗುವುದು ರೂಢಿ. ನನ್ನನ್ನು  ಅಷ್ಟು ದೂರ ನಡೆಸಿಕೊಂಡು  ಹೋಗುವುದು 'ಅಪ್ಪ ಹೋಪ' ಕೆಲಸ ಅಲ್ಲ! ಅಮ್ಮನಿಗೆ  ಹೆಚ್ಚು ದೂರ ಎತ್ತಿಕೊಳ್ಳಲು ಆಗುತ್ತಿರಲಿಲ್ಲ. ಅನಾಥ ಬಂಧುವಂತೆ ಸಿಕ್ಕಿದ್ದು ನನ್ನ ಚಿಕ್ಕಪ್ಪ! ಸ್ವಲ್ಪ ದೂರ ನಡೆದು, ನಡೆಯುವುದಕ್ಕಿಂತ ಹೆಚ್ಚು ವಟಗುಟ್ಟಿ ಸುಸ್ತಾದಾಗ,  ಪ್ರಸಾದ ಚಿಕ್ಕಯ್ಯನ  ಹೆಗಲ ಮೇಲೆ ಕೂತು 'ತೊಂಪಟ ತೊಂಪಟ' ಪ್ರಯಾಣ - ಆನೆ ನೋಡಲು!  ಅವನ ಭುಜ  ಎಷ್ಟು  ನೋವಾಯಿತೋ..  ಅದೆಲ್ಲ ಯೋಚನೆ ಮಾಡಲು ಆಗ ಬುದ್ಧಿ ಇರಲಿಲ್ಲ!

ದೊಡ್ಡ ಆನೆಗೆ - ಮಾವುತ ಏನೇನೋ  ಒದರುತ್ತಿದ್ದ , ತನ್ನ ಕಾಲಿನಲ್ಲಿ ಅದರ ಕಿವಿಗೆ ತಿವಿಯುತ್ತಿದ್ದ. ದೊಡ್ಡದೊಂದು ಮರದ ತುಂಡನ್ನು ತನ್ನ ಸೊಂಡಿಲಿನಲ್ಲಿ ತಳ್ಳುತ್ತಿತ್ತೋ ಎಳೆಯುತ್ತಿತ್ತೋ ನನಗಂತೂ ಸ್ಪಷ್ಟವಾಗಲಿಲ್ಲ. ದೃಶ್ಯ ನೋಡಲು ಬಹಳ ಮಂದಿ ಬಂದಿದ್ದರು. ಹಾಸಡ್ಕದಿಂದ ಬಂದವರ ಜೊತೆಗೊಂದು ಬೆಕ್ಕೂ ಸಹ! ಆ ನಿರ್ಭಯ ಪುಟಾಣಿ  ಆನೆಗೆ ತೀರಾ ಹತ್ತಿರ ಹೋಗಿ ಕುಣಿದಾಡುತ್ತಿತ್ತು. ಯಾವ ಕಲ್ಪನೆಯೂ ಇಲ್ಲದೇ ಸುಮ್ಮನೆ 'ಆನೆ ನೋಡ್ಲೆ ಹೋಯೆಕ್ಕು!' ಎಂದು ಹಠಹಿಡಿದಿದ್ದ ನನಗೆ ಒಟ್ಟಾರೆ ಈ  ದೃಶ್ಯ ತೀರಾ ಅನಿರೀಕ್ಷಿತ. ಆನೆಯ ಗಾತ್ರವೋ, ಮಾಹುತನ ಅರ್ಥವಾಗದ ಮಲಯಾಳದ ಮಾತುಗಳೋ, ನನಗಿಲ್ಲದ ಧೈರ್ಯದ ಬೆಕ್ಕಿನ ಮೇಲಿನ ದಿಢೀರ್ ಪ್ರೀತಿಯೋ - ನಡೆದು, ಎಲ್ಲರ ಕಿವಿ, ತಲೆ "ಕೊರೆದ" ಸುಸ್ತಿನ ಹಸಿವೋ ..

"ನೋಡಿದ್ದು ಸಾಕು.. ಹೋಪ!! " ಎಂದು ರಾಗ ಶುರು.. 

ಅಷ್ಟೆಲ್ಲಾ ಕಷ್ಟಪಟ್ಟು ಶಾಲೆ ತಪ್ಪಿಸಿ ಹೋಗಿ ಮಾಡಿದ್ದೇನು ?! ಎಲ್ಲಾ ಕೆಲಸ ಬಿಟ್ಟು ಮಗಳ ಕುಶಿಗೆಂದು ಬಂದ ಅಮ್ಮನಿಗೆ ಹೇಗಾಗಬೇಡ? ಹೆಗಲಲ್ಲಿ ಹೊತ್ತ ಇನ್ನೂ ವಿದ್ಯಾರ್ಥಿಯಾಗಿದ್ದ ಆ ಚಿಕ್ಕಪ್ಪನಿಗೆ ಎಷ್ಟು ಅನ್ಯಾಯ ..

 ಛೆ ಛೆ !  ನೆನೆದಾಗಲೆಲ್ಲ ಆ ಆನೆಯ ಗಾತ್ರದಷ್ಟು ನಾಚಿಕೆಯಾಗುತ್ತದೆ.

No comments:

Post a Comment